ಉತ್ತರಪ್ರದೇಶದಲ್ಲಿ ತಾರಕಕ್ಕೇರಿದ ಅಪ್ಪ- ಮಗನ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

Akhilesh-Yadav

ಲಖನೌ, ಅ.23- ಉತ್ತರಪ್ರದೇಶದಲ್ಲಿ ವಿಶಿಷ್ಟ ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು, ಅಪ್ಪ ಮತ್ತು ಮಗ (ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್) ನಡುವೆ ನಡೆಯುತ್ತಿರುವ ಜಟಾಪಟಿ ತಾರಕಕ್ಕೇರಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ವಿಧಾನಸಭೈ ಚುನಾವಣೆಗೆ ಮುನ್ನವೇ ಸಮಾಜವಾದಿ ಪಕ್ಷ ಹೋಳಾಗುವ ಸಾಧ್ಯತೆ ಹೆಚ್ಚಾಗಿದೆ.  ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದಿರುವ ಆಂತರಿಕ ಬಿಕ್ಕಟ್ಟು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮುಲಾಯಂ ಸಿಂಗ್ ಯಾದವ್‍ಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಭಿನ್ನಮತೀಯರು ಅಖಿಲೇಶ್ ಯಾದವ್‍ರನ್ನು ದಾಳವಾಗಿ ಬಳಸಿಕೊಳ್ಳಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಅಖಿಲೇಶ್ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ರಚಿಸುವ ಸಾಧ್ಯಾಸಾಧ್ಯತೆ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕ ಮತ್ತು ಅಖಿಲೇಶ್‍ರ ಪರಮಾಪ್ತ ಉದಯ್‍ಸಿಂಗ್‍ರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಬದುಕಿನತ್ತ ಸಾಗಲು ಅಖಿಲೇಶ್ ಸಾಧಕ-ಬಾಧಕಗಳನ್ನು ಪರಾಮರ್ಶಿಸುತ್ತಿದ್ಧಾರೆ ಎಂದು ಹೇಳಲಾಗುತ್ತಿದೆ.  ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಮುಲಾಯಂ ಸಿಂಗ್ ನಾಳೆ ಪಕ್ಷದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಭೈ ಕರೆದು ಎಸ್‍ಪಿಯಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯಗಳ ಶಮನಕ್ಕೆ ಯತ್ನಿಸಿರುವಾಗಲೇ ಇದೇ ಶಾಸಕರನ್ನು ಇಂದೇ ತರಾತುರಿಯಲ್ಲಿ ಭೈೀಟಿ ಮಾಡಲು ಅಖಿಲೇಶ್ ಸಮಯ ನಿಗದಿಗೊಳಿಸಿದ್ದಾರೆ. ಹೀಗಾಗಿ ಮುಂದಿನ 36 ಗಂಟೆಗಳಲ್ಲಿ ಕಂಡುಬರುವ ಬೆಳವಣಿಗೆಯು ಅತ್ಯಂತ ಮಹತ್ವದೆಂದೇ ವಿಶ್ಲೇಷಿಸಲಾಗುತ್ತಿದೆ.

ಅಪ್ಪ-ಮಗನ ಹಗ್ಗ-ಜಗ್ಗಾಟವನ್ನು ಅಂತ್ಯಗೊಳಿಸಲು ಪಕ್ಷದ ಹಿರಿಯ ಮುಖಂಡರು ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಪ್ರಯತ್ನಗಳು ವಿಫಲವಾಗಿವೆ. ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ತೆಪೆ ಹಾಕುವ ಕೆಲಸ ನಿರಂತರವಾಗಿ ನಡೆದಷ್ಟೂ ವೈಮನಸ್ಯದ ಕಂದಕ ಹೆಚ್ಚಾಗುತ್ತಿದ್ದು, ಚುನಾವಣೆಗೆ ಮೊದಲೇ ಪಕ್ಷ ವಿಭಜನೆಯಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಅಖಿಲೇಶ್ ಅಸಮಾಧಾನ :

ಎಂಎಲ್‍ಸಿ ಮತ್ತು ತಮ್ಮ ಪರಮಾಪ್ತ ಉದಯ್‍ಸಿಂಗ್‍ರನ್ನು ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿರುವ ಬಗ್ಗೆ ಅಖಿಲೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಖಿಲೇಶ್ ಅವರಿಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಉದಯವೀರ್ ಸಿಂಗ್ ಮುಲಾಯಂರಿಗೆ ಪತ್ರ ಬರೆದಿದ್ದರು. ಅಲ್ಲದೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಿವಪಾಲ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಮುಖ್ಯಮಂತ್ರಿ ಅಖಿಲೇಶ್ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು.

ಮುಲಾಯಂ ವಿರುದ್ಧ ನಿಂದನಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಎಸ್ಪಿಯ ಉತ್ತರ ಪ್ರದೇಶ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.  ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸರಿಪಡಿಸಲಾರದಷ್ಟು ಅಳಕ್ಕಿಳಿದಿದ್ದು, ಎಸ್ಪಿ ಎರಡು ಹೋಳಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin