ಉತ್ತರ ಪ್ರದೇಶದಲ್ಲಿಂದು 5ನೆ ಹಂತದ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Uttar-Pradesh-a014

ಲಕ್ನೋ, ಫೆ.27- ದೇಶ ರಾಜಕಾರಣದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಉತ್ತರ ಪ್ರದೇಶ ವಿಧಾನಸಭೆಯ ಐದನೇ ಹಂತಕ್ಕೆ ಇಂದು ವ್ಯಾಪಕ ಬಂದೋಬಸ್ತ್‍ನೊಂದಿಗೆ ಚುರುಕಿನ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಇನ್ನು ಎರಡು ಹಂತಗಳ ಮತದಾನ ಬಾಕಿ ಉಳಿದಿದೆ.
ಭಾರತ-ನೇಪಾಳದ ಐದು ಗಡಿ ಪ್ರದೇಶಗಳೂ ಸೇರಿದಂತೆ 11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನವಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಿನ್ನೆ ತೆರಾಯ್ ಗಡಿ ಪ್ರದೇಶದ ಅತಿ ಸೂಕ್ಷ್ಮ ಮತ ಕೇಂದ್ರಗಳಲ್ಲಿ ಸಶಸ್ತ್ರಪಡೆಗಳ ಯೋಧರು ಬಂದೋಬಸ್ತ್‍ಗಾಗಿ ಧ್ವಜ ಪಥಸಂಚಲನ ನಡೆಸಿದರು.

617 ಅಭ್ಯರ್ಥಿಗಳ ಭವಿಷ್ಯವನ್ನು 1.8 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ವಿವಾದಾತ್ಮಕ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ (ಎಸ್‍ಪಿ), ಅಮೇಥಿಯ ರಾಜ ವಂಶಸ್ಥ ಸಂಜಯ್ ಸಿಂಗ್ ಅವರ ಪತ್ನಿ ಅಮಿತಾ ಸಿಂಗ್ (ಕಾಂಗ್ರೆಸ್) ಮತ್ತು ಮಾಜಿ ಪತ್ನಿ ಗರೀಮಾ ಸಿಂಗ್ (ಬಿಜೆಪಿ) ಚುನಾವಣಾ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಹೀಗಾಗಿ ಈ ರಾಣಿಯರ ಕದನ ಕುತೂಹಲ ಕೆರಳಿಸಿದೆ.   2012ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷವು 51 ಕ್ಷೇತ್ರಗಳಲ್ಲಿ 37 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ ಆರು ಮತ್ತು ಬಿಜೆಪಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಹುಜನ ಸಮಾಜವಾದಿ ಪಕ್ಷವು ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು.

ದೇಶದ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು (404) ಹೊಂದಿರುವ ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆ.11, 15, 19 ಮತ್ತು 23ರಂದು ಕ್ರಮವಾಗಿ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಹಂತಕ್ಕೆ ಚುನಾವಣೆ ನಡೆದಿತ್ತು. ಮುಂದಿನ ಎರಡು ಹಂತಗಳಿಗೆ ಮಾರ್ಚ್ 4 ಮತ್ತು 8ರಂದು ಮತದಾನ ನಡೆಯಲಿದೆ. ಮಾರ್ಚ್ 11ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin