ಉತ್ತರ ಪ್ರದೇಶ ಚುನಾವಣೆ : ಮೊದಲ ಹಂತದಲ್ಲಿ ಶೇ.64ರಷ್ಟು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Voting--01

ಲಕ್ನೋ, ಫೆ.11-ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಅಗ್ನಿಪರೀಕ್ಷೆ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಎರಡನೇ ಚರಣವಾಗಿ ಹೈವೋಲ್ಟೇಜ್ ರಾಜಕೀಯಕ್ಕೆ ಸಾಕ್ಷಿಯಾದ ಉತ್ತರಪ್ರದೇಶದಲ್ಲಿ ಇಂದು ಮೊದಲ ಹಂತಕ್ಕೆ ಮತದಾನ ನಡೆಯಿತು. ವ್ಯಾಪಾಕ ಬಿಗಿ ಭದ್ರತೆ ನಡುವೆಯೂ ಅಲ್ಲಲ್ಲಿ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು. ಸರಾಸರಿ ಶೇ.64ರಷ್ಟು ಮಂದಿ ತನ್ನ ಹಕ್ಕು ಚಲಾವಣೆ ಮಾಡಿದ್ದಾರೆ.  ಇಂದು ಬೆಳಗ್ಗೆ 7 ಗಂಟೆಯಿಂದಲೇ ಕೊರೆಯುವ ಚಳಿಯನ್ನು ಲೆಕ್ಕಿಸದೇ ಮತದಾರರ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನ ಸಂದರ್ಭದಲ್ಲಿ ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರಗಳು ಕೈಕೊಟ್ಟಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೂ ಸೇರಿದಂತೆ 26,823 ಮತಕೇಂದ್ರಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಅರೆ ಸೇನಾಪಡೆ ತುಕ್ಕಡಿಗಳನ್ನು ಭದ್ರತೆ ನಿಯೋಜಿಸಲಾಗಿತ್ತು.
ದೇಶದ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು (404) ಹೊಂದಿರುವ ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಇದು ಮೊದಲನೆಯದ್ದು. ಪಶ್ಚಿಮ ಉತ್ತರ ಪ್ರದೇಶದ 15 ಜಿಲ್ಲೆಗಳ 73 ಕ್ಷೇತ್ರಗಳಲ್ಲಿ 839 ಅಭ್ಯರ್ಥಿಗಳ ಭವಿಷ್ಯವನ್ನು ಇಂದು 2.57 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ, ಬಿಜೆಪಿ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಲೋಕದಳ, ಅಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ನೋಯ್ಡಾ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್, ಮಥುರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಮಾಥುರ್, ತಾನಾಭವನ್‍ನಿಂದ ಬಿಜೆಪಿಯ ವಿವಾದಿನ ಶಾಸಕ ಸುರೇಶ್ ರಾಣಾ ಪ್ರಮುಖವಾಗಿ ಅಖಾಡದಲ್ಲಿದ್ದಾರೆ.   ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್-ಎಸ್‍ಪಿ ಹಾಗೂ ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಇದ್ದು, ಈ ಪಕ್ಷಗಳಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
ಅಖಿಲೇಶ್ ಯಾದವ್‍ರನ್ನು ಸಮಾಜವಾದಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಫಲಿತಾಂಶದ ನಂತರ ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ.

ಕೋಮುವಾದಿ ಪಕ್ಷವನ್ನು ರಾಜ್ಯದಿಂದ ಹೊರಗಿಡಬೇಕೆಂಬ ಉದ್ದೇಶದೊಂದಿಗೆ ಅಖಿಲೇಶ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಹಾಮೈತ್ರಿಗೆ ಕೈಜೋಡಿಸಿರುವುದು ಹೊಸ ಬೆಳವಣಿಗೆಯಾಗಿದೆ. ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದು, ಈಗ ಮೇಲ್ನೋಟಕ್ಕೆ ಶಮನಗೊಂಡಂತೆ ಕಾಣುತ್ತಿದೆ. ಮತದಾರ ಈ ಬೆಳವಣಿಗೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ಕುತೂಹಲವೂ ಇದ್ದೆ ಇದೆ.   ಇನ್ನು ಬಿಜೆಪಿಯಲ್ಲಿ ನಿಷ್ಠಾವಂತರದನ್ನು ಕಡೆಗಣಿಸಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ ಎಂಬ ತೀವ್ರ ಅಸಮಾಧಾನ ಕಾರ್ಯಕರ್ತರಲ್ಲಿ ಮನೆ ಮಾಡಿದ್ದು, ಒಂದೆಡೆ ಬಂಡಾಯ ಅಭ್ಯರ್ಥಿಗಳು ಕಮಲ ಪಾಳಯಕ್ಕೆ ತಲೆನೋವು ತಂದಿದೆ.

ಇನ್ನು ಮಾಯಾವತಿ ನೇತೃತ್ವದ ಬಿಎಸ್‍ಪಿ ಮೊದಲಿನಷ್ಟು ತನ್ನ ಪ್ರಾಬಲ್ಯ ಉಳಿಸಿಕೊಂಡಿಲ್ಲ. ಅದಾಗ್ಯೂ ಮತಗಳ ವಿಭಜನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin