ಉಪಚುನಾವಣಾ ಕಣದಲ್ಲಿ ಕುಣಿದಾಡುತಿದೆ ಕಾಂಚಾಣ, ಸಾರಿಗೆ ನಿರ್ದೇಶಕರ ಕಾರಲ್ಲಿತ್ತು 20 ಲಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Norte-2000

ಬೆಂಗಳೂರು, ಏ.7-ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಝಣಝಣ ಕಾಂಚಾಣದ ಸದ್ದು ಜೋರಾಗಿದೆ.ಫಲಿತಾಂಶದ ಮೇಲೆ ಬೆಟ್ಟಿಂಗ್ ದಂಧೆಯೂ ಶುರುವಾಗಿದೆ.  ಅಲ್ಲಲ್ಲಿ ಮತದಾರರಿಗೆ ಹಂಚಲು ತಂದ ಲಕ್ಷಾಂತರ ರೂ. ಹಣವನ್ನು ಸಹ ಪೊಲೀಸರು ವಶಪಡಿಸಿಕೊಂಡಿರುವುದು ವರದಿಯಾಗಿದ್ದು, ಆಯೋಗಕ್ಕೆ ದೂರು ನೀಡಲಾಗಿದೆ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಜೊತೆಗೆ ಸಂಘರ್ಷ, ಮಾತಿನ ಚಕಮಕಿಗಳು ನಡೆದಿವೆ.

ಬಹಿರಂಗ ಪ್ರಚಾರ ಇಂದು ಅಂತ್ಯಗೊಳ್ಳುತ್ತಿದ್ದು, ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಬೇಕಿದ್ದು, ಭಾರೀ ಪ್ರಮಾಣದ ಹಣ ಹಂಚಿಕೆಯಾಗುವ ಸಾಧ್ಯತೆ ಇದೆ. ಮತದಾರರ ಮನ ಓಲೈಕೆಗೆ ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸಿದ್ದಾರೆ.

20 ಲಕ್ಷ ವಶ:

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಲಕ್ಷಾಂತರ ರೂ. ಹಣ ಪತ್ತೆಯಾಗಿದೆ.  ಗುಂಡ್ಲುಪೇಟೆಯ ಖಾಸಗಿ ಹೊಟೇಲ್‍ನ ಬಳಿ ಕಾರನ್ನು ವಶಪಡಿಸಿಕೊಂಡು ತಪಾಸಣೆಗೊಳಪಡಿಸಿದಾಗ 2 ಸಾವಿರ ನೋಟುಗಳ 10 ಕಂತೆಗಳು ಸುಮಾರು 20 ಲಕ್ಷ ರೂ. ಹಣ ಪತ್ತೆಯಾಗಿದ್ದು, ಚುನಾವಣಾಧಿಕಾರಿಗಳು ಈ ಹಣವನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಗುಂಡ್ಲುಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ ಹಣದ ಮೂಲದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಣ ಎಂದು ಬಿಜೆಪಿಯವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಿನ ಸೀಟಿನ ಕೆಳಗೆ ಇಟ್ಟು ಈ ಹಣವನ್ನು ಸಾಗಿಸಲಾಗುತ್ತಿತ್ತು. ಇಷ್ಟೇ ಅಲ್ಲದೆ, ಗುಂಡ್ಲುಪೇಟೆಯ ಹಲವೆಡೆ ಮತದಾರರಿಗೆ ಹಣವನ್ನು ಹಂಚುವ ಪ್ರಕರಣಗಳು ನಡೆದಿವೆ. ಇದನ್ನು ಪ್ರಶ್ನಿಸಿದ ಬಿಜೆಪಿ ಪಕ್ಷದ ಕೆಲವು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.  ಸುಮಾರು 5ಲಕ್ಷ ರೂ.ಗಳಷ್ಟು ಹಣ ಹಿಡಿದುಕೊಟ್ಟಿದ್ದ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೆ ಅಕ್ರಮವಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಣ ಹಂಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ನಾವು ಮತದಾರರಿಗೆ ಹಣ ಹಂಚುತ್ತಿಲ್ಲ. ಚುನಾವಣಾ ಕಾರ್ಯಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಹಾಗೂ ವಾಹನಗಳಿಗೆ ಹಣ ನೀಡುತ್ತಿರುವುದಾಗಿ ಸಮರ್ಥನೆ ನೀಡಿದ್ದರು.  ಹಣ ಹಂಚಿಕೆಯಲ್ಲಿ ಯಾವ ಪಕ್ಷವೇನೂ ಕಮ್ಮಿಯಿಲ್ಲ. ಆರೋಪ-ಪ್ರತ್ಯಾರೋಪ ಮೇಲ್ನೋಟಕ್ಕೆ ಮಾಡಿದರೂ ಒಳಗೊಳಗೆ ಆಮಿಷಗಳನ್ನು ಒಡ್ಡುತ್ತಲೇ ಇರುತ್ತಾರೆ. ಹಾಗಾಗಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin