ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲೂ ಗೆಲುವು : ಕಾಂಗ್ರೆಸ್’ನಿಂದ ಮಹಾಸಮರಕ್ಕೆ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Nanjanagud--01-Result

ಬೆಂಗಳೂರು,ಏ.13– ಮುಂಬರುವ 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು ,ಪ್ರತಿಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಮುಂದಿನ ಮಹಾಸಮರಕ್ಕೆ ರಣಕಹಳೆ ಮೊಳಗಿಸಿದೆ. [ ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ  (Live Updates)]

ಇನ್ನು ಎರಡು ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಫಲಿತಾಂಶ ಭಾರೀ ಮರ್ಮಾಘಾತ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ದಲಿತರ ಸ್ವಾಭಿಮಾನದ ಟ್ರಂಪ್ ಕಾರ್ಡ್ ಬಳಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‍ಗೂ ಹಿನ್ನಡೆಯಾಗಿದೆ.  ಇತ್ತ ಪತಿಯ ಸಾವಿನ ಅನುಕಂಪವನ್ನೇ ನೆಚ್ಚಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್‍ರ ಪತ್ನಿ ಗೀತಾ ಮಹದೇವಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 21,334 ಮತಗಳ ಅಂತರಿಂದ ಜಯಭೇರಿ ಭಾರಿಸಿದರೆ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‍ನ ಗೀತಾ ಮಹದೇವಪ್ರಸಾದ್ 10,887 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.  ಕಳಲೆ ಕೇಶವಮೂರ್ತಿ ಒಟ್ಟು ಚಲಾವಣೆಯಾದ ಮತಗಳಲ್ಲಿ 86,212 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್ 64,878 ಮತಗಳನ್ನು ಪಡೆದಿದ್ದಾರೆ. ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ 90258 ಮತಗಳನ್ನು ಪಡೆದರೆ , ಬಿಜೆಪಿಯ ನಿರಂಜನ್‍ಕುಮಾರ್ 79381 ಮತಗಳನ್ನು ಪಡೆದರು. ಅಂತಿಮವಾಗಿ ಗೀತಾ ಮಹದೇವಪ್ರಸಾದ್ 10,877 ಮತಗಳ ಅಂತರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾದರು.

ಉಪಸಮರದ ಫಲಿತಾಂಶ ಆಡಳಿತರೂಢ ಕಾಂಗ್ರೆಸ್‍ಗಾಗಲಿ ಇಲ್ಲವೇ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ 2018ರ ಮಹಾಸಮರಕ್ಕೆ ಮುನ್ನುಗ್ಗಲು ಒಂದಿಷ್ಟು ಆನೆಬಲ ಬಂದಿರುವುದು ಸುಳ್ಳಲ್ಲ. ಫಲಿತಾಂಶದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದರೆ ಅವರ ವಿರುದ್ದ ತೊಡೆತೊಟ್ಟಿದ್ದ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಭಾರೀ ಮುಖಭಂಗವಾಗಿದೆ.

ನಂಜನಗೂಡು : 
ಕಾಂಗ್ರೆಸ್ – ಕಳಲೆ ಕೇಶವಮೂರ್ತಿ- 86212
ಬಿಜೆಪಿ -ವಿ.ಶ್ರೀನಿವಾಸ್ ಪ್ರಸಾದ್ -64878
ಗೆಲುವಿನ ಅಂತರ – 21334

ಗುಂಡ್ಲುಪೇಟೆ : 
ಕಾಂಗ್ರೆಸ್-ಗೀತಾ ಮಹದೇವಪ್ರಸಾದ್-90258
ಬಿಜೆಪಿ – ನಿರಂಜನ್‍ಕುಮಾರ್-79381
ಗೆಲುವಿನ ಅಂತರ- 10877
ಪ್ರಾರಂಭದಿಂದಲೇ ಮುನ್ನಡೆ:

ಬೆಳಗ್ಗೆ 8 ಗಂಟೆಗೆ ನಂಜನಗೂಡಿನ ಜೆಎಸ್‍ಎಸ್ ಕಾಲೇಜು ಹಾಗೂ ಗುಂಡ್ಲುಪೇಟೆಯ ಸೆಂಟ್‍ಜಾನ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಾರಂಭದಲ್ಲೇ ಮುನ್ನಡೆ ಕಾಯ್ದುಕೊಂಡರು.   ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ನಂಜನಗೂಡಿನಲ್ಲಿ ಕೈ ಹುರಿಯಾಳು ಕಳಲೆ ಕೇಶವಮೂರ್ತಿ, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ದ ಕೊನೆಯ ಸುತ್ತಿನವರೆಗೂ ಭಾರೀ ಮತಗಳ ಅಂತರವನ್ನು ಕಾಪಾಡಿಕೊಂಡರು.

ಪ್ರಾರಂಭದ ಸುತ್ತಿನಲ್ಲೇ 2000 ಮತಗಳ ಮುನ್ನಡೆ ಪಡೆದರೆ ತದನಂತರ ಪ್ರತಿ ಸುತ್ತಿನಲ್ಲೂ ಅಂತರವನ್ನು ಹೆಚ್ಚಿಸಿಕೊಂಡರು. 4ನೇ ಸುತ್ತಿನಲ್ಲಿ ಇದ್ದಕ್ಕಿದ್ದಂತೆ 10 ಸಾವಿರ ಮತಗಳ ಮುನ್ನಡೆ ಹೆಚ್ಚಿಸಿಕೊಂಡು ಅಂತಿಮ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು.  ಅಂತಿಮವಾಗಿ ಕೊನೆಯ ಸುತ್ತಿನ ಮತಗಳ ಎಣಿಕೆ ಮುಗಿದಾಗ ಕಾಂಗ್ರೆಸ್ 21,334 ಮತಗಳ ಅಂತರದಿಂದ ಗೆಲುವು ಸಾಧಿಸಿತು.   ವಿಶೇಷವೆಂದರೆ ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಪಡೆದರು. ಶ್ರೀನಿವಾಸ್ ಪ್ರಸಾದ್ ಅವರ ದಲಿತರ ಸ್ವಾಭಿಮಾನ, ಯಡಿಯೂರಪ್ಪನವರ ಜಾತಿ ಕ್ರೋಢೀಕರಣ ಕೈ ಹಿಡಿಯದೆ ಸಿದ್ದರಾಮಯ್ಯನವರ ಅಹಿಂದ ಫ್ಯಾಕ್ಟರ್ ಕೈ ಹಿಡಿದಿದೆ.
ಕೈ ಹಿಡಿದ ಪತಿಯ ಸಾವು:

ಮಲೆ ಮಹದೇಶ್ವರನ ನೆಲವೀಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದ್ದಾರೆ.   ಪ್ರಾರಂಭಿಕ ಸುತ್ತಿನಿಂದಲೇ ಗೀತಾ ಅವರು ಮುನ್ನಡೆ ಪಡೆದುಕೊಂಡು ಕೊನೆಯ 14ನೇ ಸುತ್ತಿಗೆ ವಿಜಯದ ಪತಾಕೆ ಹಾರಿಸಿದರು. ಸರಣಿ ಸೋಲನ್ನೇ ಅನುಕಂಪ ಮಾಡಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ಅವರನ್ನು ಮತದಾರ ಮೂರನೇ ಬಾರಿ ತಿರಸ್ಕರಿಸಿದ್ದಾನೆ.

ಪತಿಯ ಸಾವು, ಸಚಿವ ಡಿ.ಕೆ.ಶಿವಕುಮಾರ್ ಚಾಣಾಕ್ಷತೆ, ಕಾರ್ಯಕರ್ತರ ಒಗ್ಗಟ್ಟು ಇತ್ಯಾದಿ ಅಂಶಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿವೆ.
ಅಂತಿಮವಾಗಿ ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ವಿರುದ್ಧ 10,877 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

ನಂಜನಗೂಡು   ಕಾಂಗ್ರೆಸ್    ಬಿಜೆಪಿ    ಅಂತರ

1ನೇ ಸುತ್ತು     54675        3534       2101
2ನೇ ಸುತ್ತು      11524      6812        4712
3ನೇ ಸುತ್ತು      18477      9244        9233
4ನೇ ಸುತ್ತು      23595     12603     10992
5ನೇ ಸುತ್ತು      30061     17134       12927
6ನೇ ಸುತ್ತು     35936     20531      15585
7ನೇ ಸುತ್ತು     41196       25300     15896
8ನೇ ಸುತ್ತು    44671      28962       15709
9ನೇ ಸುತ್ತು    49634      32218      17416
10ನೇ ಸುತ್ತು   53988     37343     16645
11ನೇ ಸುತ್ತು   58,261    41945       16316
12ನೇ ಸುತ್ತು   63486    45926       17560
13ನೇ ಸುತ್ತು   67922     49615        18307
14ನೇ ಸುತ್ತು    72,568    54399    18169
15ನೇ ಸುತ್ತು    77,372     58144     19611
16ನೇ ಸುತ್ತು    81,795    62,184     21344

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin