ಉಪಚುನಾವಣೆ : ಆರು ರಾಜ್ಯಗಳಲ್ಲಿ ಶಾಂತಿಯುತ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Voting-01

ನವದೆಹಲಿ, ನ.19-ನೋಟು ರದ್ಧತಿಯ ಛಾಯೆಯ ನಡುವೆ ಮುಂಬರುವ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲ್ಪಟಿರುವ ಆರು ರಾಜ್ಯಗಳಲ್ಲಿ ಇಂದು ವ್ಯಾಪಕ ಬಿಗಿ ಭದ್ರತೆ ನಡುವೆ ಮತದಾನ ನಡೆಯಿತು.  ಪಶ್ಚಿಮಬಂಗಾಳ, ಅರುಣಾಚಲ ಪ್ರದೇಶ, ತ್ರಿಪುರ, ಮಧ್ಯಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ನಡೆದು, ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಪಶ್ಚಿಮ ಬಂಗಾಳ:
ಕೂಚ್ ಬೆಹರ್ ಮತ್ತು ಟಮ್ಲುಕ್ ಲೋಕಸಭಾ ಕ್ಷೇತ್ರಗಳು ಹಾಗೂ ಮಂಟೇಸ್ವರ್ ವಿಧಾನಸಭಾ ಕ್ಷೇತ್ರಕ್ಕೆ ಇದು ಮತದಾನ ನಡೆಯಿತು. ಈ ಮೂರು ಕ್ಷೇತ್ರಗಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಬಿಜೆಪಿ, ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಅರುಣಾಚಲ ಪ್ರದೇಶ :
ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ಮತದಾರರು ಬೆಳಗಿನಿಂದಲೇ ತಮ್ಮ ಹಕ್ಕುಗಳನ್ನು ಚಲಾಯಿಸಿದ ದೃಶ್ಯ ಕಂಡುಬಂದಿತು. ಆತ್ಮಹತ್ಯೆಗೆ ಶರಣಾದ ಮಾಜಿ ಮುಖ್ಯಮಂತ್ರಿ ಕಲಿಕೋ ಪುಲ್ ಅವರ ಮೂವರು ಪತ್ನಿಯರಲ್ಲಿ ಒಬ್ಬರಾದ ದಸಾಂಗ್ಲು ಪುಲ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ತ್ರಿಪುರ:
ಈಶಾನ್ಯ ಭಾರತದ ಮತ್ತೊಂದು ರಾಜ್ಯವಾದ ತ್ರಿಪುರದ ಬಾಜರ್ಲ ಮತ್ತು ಖೋವೈ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬಿಗಿ ಭದ್ರತೆ ನಡುವೆ ಶಾಂತಿಯುತ ಮತದಾನ ನಡೆದ ಬಗ್ಗೆ ವರದಿಯಾಗಿದೆ.

ಮಧ್ಯಪ್ರದೇಶ:
ಈ ರಾಜ್ಯದ ಶಾದೋಲ್ ಲೋಕಸಭೆ ಮತ್ತು ನೇಪಾನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಅಧಿಕ ಮ್‍ಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸದ ನಂತರ ಆಡಳಿತಾರೂಢ ಬಿಜೆಪಿಗೆ ಈ ಉಪಚುನಾವಣೆ ಸತ್ವಪರೀಕ್ಷೆಯಾಗಿದೆ.

ತಮಿಳುನಾಡು/ಪುದುಚೇರಿ:
ತಮಿಳುನಾಡಿನ ತಂಜಾವೂರು, ಅರವಕ್ಕುರಿಚಿ ಮತ್ತು ತಿರುಪ್ಪರನ್‍ಕುಡ್ರಂ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಪಕ್ಕದ ರಾಜ್ಯವಾದ ಪುದುಚೇರಿಯ ನಲ್ಲಿತೋಪೆ ವಿಧಾನಸಭಾ ಸ್ಥಾನಕ್ಕೆ ಮತದಾನ ನಡೆದಿದೆ.
ಈ ಆರು ರಾಜ್ಯಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮ ಮತಗಟ್ಟೆಗಳಿಗೆ ಬಿಎಸ್‍ಎಫ್, ಸಿಆರ್‍ಪಿಎಫ್ ಮತ್ತು ಅರೆಸೇನಾ ಪಡೆ ಯೋಧರನ್ನು ನಿಯೋಜಿಸಲಾಗಿತ್ತು.

ಮಹಾರಾಷ್ಟ್ರ ಮೇಲ್ಮನೆಗೆ ಚುನಾವಣೆ :
ಸ್ಥಳೀಯ ಸಂಸ್ಥೆಗಳಿಂದ ಮಹಾರಾಷ್ಟ್ರದ ವಿಧಾನಪರಿಷತ್ತಿನ ಆರು ಸ್ಥಾನಗಳಿಗೂ ಸಹ ಇಂದು ದ್ವೈವಾರ್ಷಿಕ ಚುನಾವಣೆ ನಡೆಯಿತು. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin