ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಸಾಧನೆಗಿಂತ ಜಾತಿಯೇ ಪ್ರಮುಖ ಅಂಶ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--Siddaramaiaha

– ರವೀಂದ್ರ ವೈ.ಎಸ್.

ಬೆಂಗಳೂರು, ಮಾ.25-2018ರ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳಿಗೂ ದಿಕ್ಸೂಚಿಯೆಂದೇ ಹೇಳಲಾಗುತ್ತಿರುವ ನಂಜನಗೂಡು-ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಅಭಿವೃದ್ಧಿ ಹಾಗೂ ಜಾತಿ ಆಧಾರದ ಮೇಲೆ ಅವಲಂಬಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಸಮರವಾಗಿರುವ ಈ ಉಪಚುನಾವಣೆಯಲ್ಲಿ ಸರ್ಕಾರದ ಸಾಧನೆಗಳಿಗಿಂತ ಜಾತಿಯೇ ಪ್ರಮುಖವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹೆಸರಿಗೆ ಮಾತ್ರ ಕಣದಲ್ಲಿದ್ದರೂ ಚುನಾವಣೆ ನಡೆಯುತ್ತಿರುವುದು ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಯಡಿಯೂರಪ್ಪ ನಡುವೆ.   ಪ್ರಬಲ ಸಮುದಾಯದ ಪ್ರಶ್ನಾತೀತ ನಾಯಕನಾಗಿರುವ ಯಡಿಯೂರಪ್ಪ ಈ ಎರಡೂ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿದ್ದು, ಗೆದ್ದರೆ ತಮ್ಮ ಹಾದಿ ಇನ್ನಷ್ಟು ಸುಗಮ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಾಯಕತ್ವದಲ್ಲೇ ಗೆದ್ದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಉಮೇದು ಸಿದ್ದರಾಮಯ್ಯನವರದು.

ಒಮ್ಮೆಯೂ ಗೆದ್ದಿಲ್ಲ:

ವಿಧಾನಸಭೆ ಚುನಾವಣೆ ನಡೆದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಜನತಾದಳ ಮತ್ತು ಕಾಂಗ್ರೆಸ್‍ನ ನಡುವೆ ಹೋರಾಟ ನಡೆಯುತ್ತಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ರಾಜ್ಯದಲ್ಲಿ ಪ್ರಬಲವಾಗಿ ಕಾಲೂರಿದ ಮೇಲೆ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧೆ ನೀಡಿದೆ. ಸತತ ಸೋಲಿನ ಸುಳಿಗೆ ಸಿಲುಕಿರುವ ಬಿಜೆಪಿ ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿ ದಾಖಲೆ ಅಳಿಸಿ ಹಾಕುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿಯೇ ಯಡಿಯೂರಪ್ಪ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಿರುವುದು ಚುನಾವಣಾ ಕಾವು ಹೆಚ್ಚುವಂತೆ ಮಾಡಿದೆ.

ಇನ್ನು ತನ್ನ ತವರು ಜಿಲ್ಲೆಯಲ್ಲೇ ಚುನಾವಣೆ ನಡೆಯುತ್ತಿರುವುದರಿಂದ ಶತಾಯಗತಾಯ ಚುನಾವಣೆ ಗೆದ್ದು ನಮ್ಮ ನಾಯಕತ್ವ ಇನ್ನಷ್ಟು ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಕೂಡ ಟೊಂಕ ಕಟ್ಟಿ ನಿಂತಿದ್ದಾರೆ.  ಇದಕ್ಕಾಗಿಯೇ ತಮ್ಮ ಆಪ್ತ ಎಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕ ಜಾತಿ ಸಚಿವರಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸೂಚನೆ ಕೊಟ್ಟಿದ್ದಾರೆ. ಗೆದ್ದರೆ ಫಲಿತಾಂಶ ಒಂದಿಷ್ಟು ವ್ಯತ್ಯಾಸವಾದರೆ ಪಕ್ಷದಲ್ಲೇ ತಮ್ಮ ನಾಯಕತ್ವದ ವಿರುದ್ಧ ಕತ್ತಿ ಮಸೆಯುತ್ತಾರೆ ಎಂಬ ಸುಳಿವು ಅರಿತೇ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಹೇಗಿದೆ ಕ್ಷೇತ್ರ:

ಅವಿಭಜಿತ ಚಾಮರಾಜನಗರದ ಹಾಗೂ ಮೈಸೂರು ಜಿಲ್ಲೆಯ ಉಪಚುನಾವಣೆ ನಡೆಯುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣಕ್ಕಾಗಿ ಶ್ರೀನಿವಾಸ್‍ಪ್ರಸಾದ್ ರಾಜೀನಾಮೆ ನೀಡಿದರೆ, ಎಚ್.ಎಸ್.ಮಹದೇವಪ್ರಸಾದ್ ಹಠಾತ್ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.  ಕ್ಷೇತ್ರದಲ್ಲಿ ಸಾಕಷ್ಟು ಪ್ರಚಲಿತ ಸಮಸ್ಯೆಗಳಿಗೆ. ಆದರೂ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತದೆ. ಶ್ರೀನಿವಾಸ್‍ಪ್ರಸಾದ್ ಹಾಗೂ ಮಹದೇವಪ್ರಸಾದ್ ಕಳೆದ ಎರಡೂ ದಶಕಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರೂ ಕ್ಷೇತ್ರವು ಈಗಲೂ ಸಮಸ್ಯೆಯಿಂದ ಹೊರತಾಗಿಲ್ಲ.  ಚುನಾವಣೆ ದಿನಾಂಕ ಮುನ್ನವೇ ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಿಗೆ ಭರಪೂರ ಅಭಿವೃದ್ಧಿ ಕಾರ್ಯಗಳನ್ನು ಹರಿಸಿದ್ದಾರೆ. ಇನ್ನು ಯಡಿಯೂರಪ್ಪ ಎರಡೂ ಕ್ಷೇತ್ರಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಹೇಳುತ್ತಿದ್ದಾರೆ.

ಜಾತಿ ಲೆಕ್ಕಾಚಾರ:

ಕಳೆದ ನಾಲ್ಕು ವರ್ಷಗಳಲ್ಲಿ ನಾವು ಚುನಾವಣೆಗೂ ಮುನ್ನ ಘೊಷಣೆ ಮಾಡಿದ ಪ್ರಣಾಳಿಕೆಯ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.  ಇತ್ತ ಯಡಿಯೂರಪ್ಪ ಕೂಡ ತಮ್ಮ ಅವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆಗಳನ್ನೇ ಮತದಾರರ ಮುಂದಿಟ್ಟಿದ್ದಾರೆ. ಮೇಲ್ನೋಟಕ್ಕೆ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಗಣ್ಯವಾಗಿದ್ದು, ಜಾತಿ ಲೆಕ್ಕಾಚಾರವೇ ಮೇಳೈಸುತ್ತಿದೆ.  ವೀರಶೈವ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪಗೆ ತಮ್ಮ ಸಮುದಾಯದ ಮತಗಳೇ ನಿರ್ಣಾಯಕವಾದರೆ ಸಿದ್ದರಾಮಯ್ಯನವರಿಗೆ ಅಹಿಂದ ಮತಗಳೇ ಗಟ್ಟಿ.

ಈ ಹಿಂದೆ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಮತ್ತು ಮಹದೇವಪ್ರಸಾದ್ ಸಾಧನೆಗಳು ಅಷ್ಟು ಬೆಳಕಿಗೆ ಬರುತ್ತಿಲ್ಲ. ಜಿಲ್ಲೆಗೆ ಶ್ರೀನಿವಾಸ್‍ಪ್ರಸಾದ್ ಏನನ್ನೂ ಕೊಡಲಿಲ್ಲ ಎಂದು ಕಾಂಗ್ರೆಸ್ಸಿಗರೇ ಅಪಪ್ರಚಾರ ನಡೆಸಿದರೆ, ಅತ್ತ ಗುಂಡ್ಲುಪೇಟೆಯಲ್ಲಿ ಮಹದೇವಪ್ರಸಾದ್ ವಿರುದ್ಧ ಇದೇ ಆರೋಪಗಳು ಕೇಳಿಬರುತ್ತಿವೆ.  ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದ್ದು, ಜಾತಿ ಆಧಾರದ ಮೇಲೆಯೇ ಚುನಾವಣೆ ನಡೆಯುತ್ತಿದೆ. ನೀರ್‍ಸಾಹೇಬ್ ಎಂದು ಖ್ಯಾತಿ ಗಳಿಸಿದ್ದ ಅಬ್ದುಲ್ ನಜೀರ್‍ಸಾಬ್, ನಾಗರತ್ನಮ್ಮ ಕೇಶವಮೂರ್ತಿರಂತಹ ಶ್ರೇಷ್ಠ ದಿಗ್ಗಜರನ್ನು ನೀಡಿದ ಗುಂಡ್ಲುಪೇಟೆಯಲ್ಲೂ ಜಾತಿ ಲೆಕ್ಕಾಚಾರವೇ ನಡೆಯುತ್ತಿದೆ.

ಕ್ಷೇತ್ರ ಪುನರ್‍ವಿಂಗಡಣೆ ನಂತರ ಮೀಸಲು ಕ್ಷೇತ್ರವಾದ ನಂಜನಗೂಡಿನಲ್ಲಿ ಮತ್ತೆ ಬದನಾಳು ಪ್ರಕರಣ ಪ್ರತಿಧ್ವನಿಸಿದೆ. ನಂಜುಂಡೇಶ್ವರ ಯಾರಿಗೆ ಸಿಹಿ ನೀಡಿ, ಯಾರಿಗೆ ಕಹಿ ನೀಡುತ್ತಾನೆ ಎಂಬುದನ್ನು ಚುನಾವಣಾ ಫಲಿತಾಂಶದವರೆಗೆ ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin