ಉಪಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ಅನೇಕರ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Byelection-Yadiyurappa

ಬೆಂಗಳೂರು,ಏ.4- ನಿರ್ಣಾಯಕವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿಯ ಅನೇಕ ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.   ಸಿಎಂ ಸಿದ್ದರಾಮಯ್ಯ , ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ , ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಇಂಧನಸ ಸಚಿವ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರ ರಾಜಕೀಯ ಭವಿಷ್ಯವು ಇದರಲ್ಲಿ ಅಡಗಿದೆ.

ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರಿಗೆ ಈ ಉಪಚುನಾವಣೆ ಅಗ್ನಿಪರೀಕ್ಷೆಯೆಂದೆ ಬಿಂಬಿತವಾಗಿದೆ. ಹೀಗಾಗಿ ಇಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿದ್ದಾರೆ.   ತಮ್ಮ ನಾಯಕತ್ವದ ವಿರುದ್ದವೇ ತೊಡೆ ತಟ್ಟಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸಿದ್ದರಾಮಯ್ಯ ಮೇಲುಗೈ ಸಾಧಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಅವರು ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮುತ್ತಾರೆ. [ ಇದನ್ನೂ ಓದಿ : ಮಿಷನ್ 150 : 2018ರ ಚುನಾವಣೆಗೆ ಬಿಜೆಪಿ ಸಂಭವನೀಯ ಹುರಿಯಾಳುಗಳ ಪಟ್ಟಿ ಸಿದ್ದ ]

ಒಂದು ವೇಳೆ ಶ್ರೀನಿವಾಸ್ ಪ್ರಸಾದ್ ಗೆಲುವಿನ ನಗು ಬೀರಿದರೆ ನಿಸ್ಸಂದೇಹವಾಗಿ ಮೈಸೂರು ಹಾಗೂ ಚಾಮರಾಜನಗರದಲ್ಲಿ ಪ್ರಬಲ ದಲಿತ ನಾಯಕನಾಗಿ ಹೊರಹೊಮ್ಮುತ್ತಾರೆ. ಇದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಇನ್ನಷ್ಟು ಕಂಟಕವಾಗಲಿದೆ.   ಇದನ್ನು ಅರಿತೇ ಸಿದ್ದರಾಮಯ್ಯ ಶತಾಯಗತಾಯ ಶ್ರೀನಿವಾಸ್ ಪ್ರಸಾದ್ ಅವರನ್ನು ಮಣಿಸಲೇಬೇಕೆಂದು ಪಣ ತೊಟ್ಟಿ ಪ್ರಚಾರ ನಡೆಸುತ್ತಿದ್ದಾರೆ. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಸಿದ್ದು ಮೇಲುಗೈ ಸಾಧಿಸಿದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಪ್ರತಿಯೊಂದರಲ್ಲೂ ಅವರೇ ಅಂತಿಮ.

ಫಲಿತಾಂಶವೇನಾದರೂ ವ್ಯತಿರಿಕ್ತವಾಗಿ ಹೊರಹೊಮ್ಮಿದರೆ ಸಿದ್ದರಾಮಯ್ಯ ವಿರುದ್ದ ಪಕ್ಷದಲ್ಲಿ ಇನ್ನಷ್ಟು ಶತ್ರುಗಳು ಹುಟ್ಟಿಕೊಳ್ಳಲಿದ್ದಾರೆ. ಅವರ ನಾಯಕತ್ವದ ವಿರುದ್ದ ಬಹಿರಂಗವಾಗಿಯೇ ಸಮರ ಸಾರುವುದು ಖಚಿತ.

ಯಡಿಯೂರಪ್ಪ ಸ್ಥಿತಿಗತಿ:

ಇನ್ನು ಉಪಚುನಾವಣೆಯಲ್ಲಿ ಗೆಲ್ಲಲ್ಲೇಬೇಕೆಂದು ಕಳೆದ 20 ದಿನಗಳಿಂದ ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಠಿಕ್ಕಾಣಿ ಹೂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಥಿತಿ ಕೂಡ ಮಾಡು ಇಲ್ಲವೇ ಮಡಿ ಎಂಬಂತಿದೆ.  ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಗೆದ್ದುಕೊಟ್ಟರೆ ಪಕ್ಷದೊಳಗೆ ಅವರ ಹಿಡಿತ ಇನ್ನಷ್ಟು ಬಿಗಿಯಾಗುತ್ತದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಅನಿವಾರ್ಯ.   ಗ್ರಹಚಾರ ಕೈಕೊಟ್ಟು ಎರಡೂ ಕ್ಷೇತ್ರಗಳಲ್ಲೂ ಸೋಲುಂಡರೆ ಯಡಿಯೂರಪ್ಪ ವಿರುದ್ದ ಬಿಜೆಪಿಯಲ್ಲಿ ಕತ್ತಿ ಮಸೆಯುವವರ ಸಂಖ್ಯೆ ಇನ್ನಷ್ಟು ದ್ವಿಗುಣಗೊಳ್ಳತ್ತದೆ. ಈಗಾಗಲೇ ಅವರ ನಾಯಕತ್ವದ ವಿರುದ್ದ ಆಗಾಗ್ಗೆ ಅಪಸ್ವರ ಬರುತ್ತಲೇ ಇದೆ. ಇದರ ಎಲ್ಲ ಮುನ್ಸೂಚನೆ ಅರಿತಿರುವ ಬಿಎಸ್‍ವೈ ಶತಾಯಗತಯಾ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಲು ಹರಸಾಹಸ ಪಡುತ್ತಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಬೇಕು. ಶ್ರೀನಿವಾಸ್ ಪ್ರಸಾದ್ ಹಾಗೂ ನಿರಂಜನ್‍ಕುಮಾರ್ ಎನ್ನದೆ ಯಡಿಯೂರಪ್ಪನವರೇ ಸ್ಪರ್ಧಿಸಿದ್ದಾರೆ ಎಂದು ಭಾವಿಸಿ ಮತ ಹಾಕಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.   ಡಾ.ಜಿ.ಪರಮೇಶ್ವರ್: ಇನ್ನು ಕಳೆದುಕೊಂಡಿರುವ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲು ಹವಣಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೂಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.   ಮುಂದಿನ ವಿಧಾನಸಭಾ ಚುನಾವಣೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದು ಅಧಿಕಾರಕ್ಕೆ ಬಂದರೆ ಸಹಜವಾಗಿ ಮುಖ್ಯಮಂತ್ರಿ ಹುದ್ದೆಗೆ ತಾವು ಕೂಡ ಆಕಾಂಕ್ಷಿ ಎಂಬುದನ್ನು ಹೈಕಮಾಂಡ್‍ಗೆ ರವಾನಿಸಲಿದ್ದಾರೆ.

ಈ ಕಾರಣಕ್ಕಾಗಿಯೇ ಅತ್ಯಂತ ಪ್ರಬಲವಾದ ಗೃಹ ಖಾತೆಯನ್ನು ತ್ಯಾಗ ಮಾಡಲು ಪರಮೇಶ್ವರ್ ಸಿದ್ಧರಾಗಿದ್ದಾರೆ.   ಡಿ.ಕೆ.ಶಿವಕುಮಾರ್: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ತೊಡೆ ತಟ್ಟಲು ಸಿದ್ದರಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‍ಗೂ ಕೂಡ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್, ಇದಕ್ಕಾಗಿಯೇ ಗುಂಡ್ಲುಪೇಟೆ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.   ಸಾಮಾನ್ಯವಾಗಿ ತಮಗೆ ವಹಿಸಿದ ಕೆಲಸವನ್ನು ಅತ್ಯಂತ ಶಿಸ್ತುಬದ್ಧವಾಗಿ ನಿಭಾಯಿಸುವ ಡಿಕೆಶಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಸಹಜವಾಗಿ ಅದರ ಶ್ರೇಯಸ್ಸು ಶಿವಕುಮಾರ್ ಅವರಿಗೆ ಸಲ್ಲುತ್ತದೆ.   ಹೀಗೆ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅನೇಕ ಮುಖಂಡರ ಹಣೆಬರಹವನ್ನು ತೀರ್ಮಾನಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin