ಉಪಚುನಾವಣೆ ವೇಳೆ ಅಕ್ರಮ ತಡೆಯಲು ಬಿಜೆಪಿ ‘ಸ್ಪೆಷಲ್ ಟೀಮ್’ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Shivasena

ಬೆಂಗಳೂರು, ಏ.7- ರಾಜ್ಯದ ಗಮನ ಸೆಳೆದಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಅಕ್ರಮ ತಡೆಗಟ್ಟಲು ಬಿಜೆಪಿ ವಿಶೇಷ ತಂಡವನ್ನು ರಚಿಸಿದೆ.  ಬಿಜೆಪಿ ಯುವ ಮೋರ್ಚಾದ ಪುರುಷ ಹಾಗೂ ಮಹಿಳಾ ಘಟಕಗಳ ಪದಾಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದು, ಹಣ, ಹೆಂಡ ಹಂಚುವುದನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶ.  ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿಶೆಟ್ಟಿ ನೇತೃತ್ವದಲ್ಲಿ ಈ ತಂಡಗಳನ್ನು ರಚಿಸಲಾಗಿದೆ.

ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ತಂಡಗಳು ಗಸ್ತು ತಿರುಗಲಿದ್ದು, ಪ್ರತಿಪಕ್ಷಗಳವರು ಮತದಾರರಿಗೆ ಹಣ, ಹೆಂಡ ಸೇರಿದಂತೆ ಯಾವುದೇ ರೀತಿಯ ಆಮಿಷವೊಡ್ಡಿದರೆ ತಕ್ಷಣವೇ ಚುನಾವಣಾಧಿಕಾರಿಗಳಿಗೆ ದೂರು ನೀಡಲಿದೆ.   ಇಂದು ಸಂಜೆ 5 ಗಂಟೆಗೆ ಎರಡೂ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಕೊನೆಯ ಎರಡು ದಿನಗಳಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಸರ್ವೇಸಾಮಾನ್ಯವಾಗಿದೆ. ಕರಾಳ ರಾತ್ರಿಯಲ್ಲಿ ನಡೆಯುವ ಮಸಲತ್ತುಗಳು ಫಲಿತಾಂಶದ ಚಿತ್ರಣವನ್ನೇ ಬದಲಿಸುವ ಸಾಧ್ಯತೆ ಇದೆ.

ಇದರ ಸೂಕ್ಷ್ಮ ಜಾಡು ಹಿಡಿದಿರುವ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ವಿಶೇಷ ತಂಡ ರಚಿಸಿದ್ದು, ಆಮಿಷವೊಡ್ಡುವವರ ಮೇಲೆ ಹದ್ದಿನ ಕಣ್ಣಿಡಲಿದೆ. ನಿನ್ನೆಯಷ್ಟೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ಮತದಾರರಿಗೆ ಹಣ ಹಂಚುತ್ತಿದ್ದ ದೃಶ್ಯ ಟಿ.ವಿ. ವಾಹಿನಿಗಳಲ್ಲಿ ಬಿತ್ತರವಾಗಿತ್ತು.   ಇನ್ನು ಇದೇ ರೀತಿ ಸಚಿವರಾದ ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಕಾಂಗ್ರೆಸ್ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರು, ಮುಖಂಡರ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ನಗದು ವಶಪಡಿಸಿಕೊಂಡಿದ್ದರು. ಎರಡೂ ಕ್ಷೇತ್ರಗಳಲ್ಲಿ ಎಗ್ಗಿಲ್ಲದೆ ಭಾರೀ ಪ್ರಮಾಣದ ಹಣದ ವಹಿವಾಟು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ತಂತ್ರವನ್ನು ಹೆಣೆದಿದೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin