ಉರಿ ಸೆಕ್ಟರ್ ಉಗ್ರರ ದಾಳಿ : 20ಕ್ಕೇರಿದ ವೀರಯೋಧರ ಸಾವಿನ ಸಂಖ್ಯೆ
ಶ್ರೀನಗರ, ಸೆ.19– ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ನಿನ್ನೆ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ ಹುತ್ಮಾತರಾದ ಯೋಧರ ಸಂಖ್ಯೆ 20ಕ್ಕೇರಿದೆ. ಭಾರೀ ಸ್ಫೋಟ ಮತ್ತು ಗುಂಡಿನ ಚಕಮಕಿಯಲ್ಲಿ ತೀವ್ರಗೊಂಡಿದ್ದ ಕನಿಷ್ಠ ಮೂವರು ಯೋಧರು ಕೊನೆಯುಸಿರೆಳೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿದೆ. ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 22 ಯೋಧರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಇಂದು ಬೆಳಿಗ್ಗೆ ಬಾದಾಮಿಬಾಗ್ ಸೇನಾ ಕೇಂದ್ರ ಕಚೇರಿಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ದೆಹಲಿಯಲ್ಲಿ ಉನ್ನತಮಟ್ಟದ ಪರಾಮರ್ಶೆ ಸಭೆ ನಡೆಸಿದರು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಾಷ್ಟ್ರೀಯ ಭದ್ರತೆ ಸಲಹೆಗಾರ, ಬೇಹುಗಾರಿಕೆ ದಳದ ನಿರ್ದೇಶಕರು, ರಾ ಮುಖ್ಯಸ್ಥರು, ಗೃಹ ಕಾರ್ಯದರ್ಶಿ, ರಕ್ಷಣಾ ಕಾರ್ಯದರ್ಶಿ, ಗಡಿ ಭದ್ರತಾ ಪಡೆ, ಸಿಆರ್ಪಿಎಫ್ ಮಹಾ ನಿರ್ದೇಶಕರು, ಗೃಹ ಮತ್ತು ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವೊಂದು ಶ್ರೀನಗರಕ್ಕೆ ತೆರಳಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.
ಮತ್ತೆ ಉಗ್ರರ ಅಟ್ಟಹಾಸ :
ಉರಿ ವಲಯದಲ್ಲಿ ಭಯೋತ್ಪಾದಕರು ಭಯಾನಕ ದಾಳಿ ನಡೆಸಿದ ಬೆನ್ನಲ್ಲೇ ಉಗ್ರರ ಗುಂಪೊಂದು ನಿನ್ನೆ ರಾತ್ರಿ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಿಡಿಡಿ ಮುಖ್ಯಸ್ಥನ ನಿವಾಸಕ್ಕೆ ನುಗ್ಗಿ ಪೊಲೀಸ್ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಪರಾರಿಯಾಗಿದೆ. ಸುಮಾರು ಎಂಟು ಜನರಿದ್ದ ಉಗ್ರರು ನಿನ್ನೆ ರಾತ್ರಿ ಜಾವೆದ್ ಅಹಮದ್ ಶೇಖ್ ಅವರು ನಿವಾಸಕ್ಕೆ ನುಗ್ಗಿ ಗಾರ್ಡ್ ಚೌಕಿಯಲ್ಲಿದ್ದ ನಾಲ್ಕು ಎಕೆ-47 ರೈಫಲ್ಗಳನ್ನು ಅಪಹರಿಸಿ ಕತ್ತಲಲ್ಲಿ ಕಣ್ಮರೆಯಾದರು.