ಎಂಇಎಸ್ ಮಹಾಮೇಳಾವ್ ಹಿನ್ನೆಲೆಯಲ್ಲಿ ಬೆಳಗಾವಿಯಾದ್ಯಂತ ಭಾರೀ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Belagavi-001

ಬೆಳಗಾವಿ, ನ.20-ಅಧಿವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಳೆ ಮಹಾಮೇಳಾವ್ ಆಯೋಜಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಅಧಿವೇಶನದ ಮೇಲೆ ಯಾವುದೇ ರೀತಿಯ ಕಪ್ಪು ಚುಕ್ಕಿ ಬಾರದಂತೆ ಹಿಂದೆಂದಿಗಿಂತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಎಂಇಎಸ್ ನಾಳೆ ನಡೆಸಲು ಉದ್ದೇಶಿಸಿರುವ ಮಹಾಮೇಳಾವ್‍ಗೆ ಜಿಲ್ಲಾಡಳಿತ ಈವರೆಗೂ ಅನುಮತಿ ನೀಡಿಲ್ಲ. ನಾಳೆ ಜಿಲ್ಲಾಧಿಕಾರಿ ಅರ್ಜಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ.
ಒಂದು ವೇಳೆ ಎಂಇಎಸ್ ಮಹಾಮೇಳಾವ್ ನಡೆಸಿದರೆ ಅಧಿವೇಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿದೆ.

ಬೆಳಗಾವಿ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಭದ್ರತೆಗಾಗಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಸುವರ್ಣಸೌಧ, ರಾಷ್ಟ್ರೀಯ ಹೆದ್ದಾರಿ, ಸರ್ಕೀಟ್‍ಹೌಸ್ ಸೇರಿದಂತೆ ನಗರದ ಆಯಕಟ್ಟಿನ ಜಾಗದಲ್ಲಿ ಇಂದು ಬೆಳಗಿನಿಂದಲೇ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದರ ಜತೆಗೆ ನಗರದ ರೈಲ್ವೆ ನಿಲ್ದಾಣ, ಸುವರ್ಣಸೌಧ, ವಿಮಾನನಿಲ್ದಾಣ, ವಿಶ್ವವಿದ್ಯಾನಿಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಒದಗಿಸಲಾಗಿದೆ. ಅಧಿವೇಶನ ನಡೆಯುವ ಸುವರ್ಣಸೌಧದ ಸುತ್ತಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸದಂತೆ ಕ್ರಮಕೈಗೊಳ್ಳಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

3562 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, 7 ಎಸ್‍ಪಿ, 9 ಹೆಚ್ಚುವರಿ ಎಸ್‍ಪಿ, 30 ಡಿವೈಎಸ್ಪಿ, 81 ಇನ್ಸ್‍ಪೆಕ್ಟರ್, 245 ಸಬ್‍ಇನ್ಸ್‍ಪೆಕ್ಟರ್, 140 ಎಎಸ್‍ಐ, 2310 ಮಹಿಳಾ ಕಾನ್ಸ್‍ಟೆಬಲ್, 500 ಹೋಂಗಾರ್ಡ್‍ಗಳನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸನ್ನದ್ಧವಾಗಿರಲಿವೆ. ನಗರ ಪೆÇಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್, ಗ್ರಾಮಾಂತರ ಎಸ್ಪಿ ರವಿಕಾಂತೇಗೌಡ ಭದ್ರತಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin