ಎಂಎಲ್ಎ ಟಿಕೆಟ್ ಮೇಲೆ ಎಂಎಲ್‌ಸಿಗಳ ಕಣ್ಣು…!

ಈ ಸುದ್ದಿಯನ್ನು ಶೇರ್ ಮಾಡಿ

MLA--01

– ಕೆ.ಎಸ್.ಜನಾರ್ದನ್
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ದಿನೇ ದಿನೇ ಹೆಚ್ಚಾಗತೊಡಗಿದ್ದಾರೆ. ಅದರಲ್ಲೂ ವಿಧಾನ ಪರಿಷತ್‍ನ ಸುಮಾರು 15ಕ್ಕೂ ಹೆಚ್ಚು ಸದಸ್ಯರು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಟಿಕೆಟ್ ಪಡೆಯಲು ಹೈಕಮಾಂಡ್ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಮುಂತಾದವರ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಲಾಬಿ ನಡೆಸುತ್ತಿದ್ದಾರೆ.

ವಿಧಾನಪರಿಷತ್‍ನಲ್ಲಿದ್ದರೆ ಜನರೊಂದಿಗೆ ಬೆರೆತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಚಿವ ಸಂಪುಟದಲ್ಲಿ ಸೇರಲು ಕೂಡ ಅವಕಾಶವಾಗುವುದಿಲ್ಲ. ಹಾಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜನರ ಮಧ್ಯದಿಂದ ಗೆದ್ದು ಬರಬೇಕು ಎಂಬ ಹಂಬಲದೊಂದಿಗೆ ಸುಮಾರು 10 ರಿಂದ 15 ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದು, ತಮ್ಮ ಅಹವಾಲನ್ನು ಹೈಕಮಾಂಡ್‍ಗೆ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಅವರು ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸಬಹುದಾಗಿದೆ. ಆದರೆ, ಉಳಿದವರು ಟಿಕೆಟ್ ಪಡೆಯುವುದು ಅಷ್ಟು ಸುಲಭವಾಗಿಲ್ಲ. ಹಾಗಾಗಿ ಹಲವರು ಈಗಿನಿಂದಲೇ ಲಾಬಿ ಶುರುವಿಟ್ಟುಕೊಂಡಿದ್ದಾರೆ. ಮೇಲ್ಮನೆ ಸದಸ್ಯರಾದ ಮೋಟಮ್ಮ, ಎಸ್.ಆರ್.ಪಾಟೀಲ್, ಉಗ್ರಪ್ಪ, ಐವಾನ್ ಡಿಸೋಜಾ, ಎಂ.ಡಿ.ಲಕ್ಷ್ಮಿನಾರಾಯಣ್, ಆರ್.ಬಿ.ತಿಮ್ಮಾಪುರ್, ಧರ್ಮಸೇನ, ರವಿ, ರಘು, ಎಂ.ಆರ್.ಸೀತಾರಾಂ, ಎಚ್.ಎಂ.ರೇವಣ್ಣ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಮತ್ತೆ ಇನ್ನೂ ಕೆಲವರು ವಿಧಾನಸಭೆಯಲ್ಲಿ ಸ್ಪರ್ಧಿಸಲು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳ ಪರಮಾಪ್ತರಾಗಿರುವ ಸಿಎಂ ಇಬ್ರಾಹಿಂ ಅವರು ಈ ಹಿಂದೆ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಅವರು ಜೆಡಿಎಸ್‍ನತ್ತ ಒಲವು ವ್ಯಕ್ತಪಡಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಎಂ.ಡಿ.ಲಕ್ಷ್ಮಿನಾರಾಯಣ್ ಅವರು ತುಮಕೂರು ಜಿಲ್ಲೆ ಅಥವಾ ಬೆಳಗಾವಿ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಮೋಟಮ್ಮ ಮೂಡಿಗೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಬಾಗಲಕೋಟೆ ಎಸ್.ಆರ್.ಪಾಟೀಲ್, ಐವಾನ್ ಡಿಸೋಜಾ ಮಂಗಳೂರು, ಆರ್.ಬಿ.ತಿಮ್ಮಾಪುರ್ ಮುಧೋಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಧಾನಸಭಾ ಸದಸ್ಯರು ಟಿಕೆಟ್ ಆಕಾಂಕ್ಷಿಗಳಾಗಿ ತಮ್ಮ ಹಕ್ಕು ಮಂಡಿಸಲಿದ್ದಾರೆ. ಟಿಕೆಟ್ ಆಯ್ಕೆ ಕಸರತ್ತು ಕೆಪಿಸಿಸಿಯಲ್ಲಿ ಈಗಾಗಲೇ ನಡೆಯುತ್ತಿದೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಮಾನದಂಡ ರೂಪಿಸಲು ನಿರ್ಧರಿಸಲಾಗಿದೆ.

ಕಳೆದ ಬಾರಿ ವಿಧಾನಸಭೆಯಲ್ಲಿ ಸೋತಿದ್ದ ಮೋಟಮ್ಮ, ಎಂ.ಆರ್.ಸೀತಾರಾಂ, ಆರ್.ಬಿ.ತಿಮ್ಮಾಪುರ್, ಸಿ.ಎಂ.ಇಬ್ರಾಹಿಂ ಮುಂತಾದವರಿಗೆ ವಿಧಾನ ಪರಿಷತ್ ಮೇಲ್ಮನೆಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತೆ ಅವರಿಗೆ ವಿಧಾನಸಭೆಗೆ ಟಿಕೆಟ್ ಕೊಡುವುದು ಎಷ್ಟು ಸೂಕ್ತ. ಎಲ್ಲ ಅವಕಾಶಗಳನ್ನೂ ಅವರಿಗೇ ಕೊಟ್ಟರೆ ನಾವೇನು ಮಾಡುವುದು ಎಂದು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರ ಆಕ್ಷೇಪವಾಗಿದೆ. ಹೀಗಾಗಿ ಪಕ್ಷ ಯಾವ ರೀತಿ ಯಾರನ್ನು ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗೆಲ್ಲುವ ಸಾಮಥ್ರ್ಯವಿರುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದೆ. ಸಮರ್ಥ ಅಭ್ಯರ್ಥಿಗಳಾಗಿದ್ದರೆ ಅವರನ್ನು ಕಣಕ್ಕಿಳಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಈಗಾಗಲೇ ಹೈಕಮಾಂಡ್ ಸೂಚನೆ ನೀಡಿದೆ. ಇಂತಹ ಸಂದರ್ಭದಲ್ಲಿ ಮೇಲ್ಮನೆಯ ಹಲವರಿಗೂ ಟಿಕೆಟ್ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Facebook Comments

Sri Raghav

Admin