ಎಂಥಾ ನಾಚಿಕೆಗೇಡು..: ಇದು ಪೊಲೀಸ್ ಠಾಣೆ ಅಲ್ಲ ಬಾರ್, ಇಲ್ಲಿ ಮಹಿಳಾ ಪಿಸಿಯೇ ಸರ್ವರ್…!

ಈ ಸುದ್ದಿಯನ್ನು ಶೇರ್ ಮಾಡಿ

Vijayapur-Police-Station--0

ವಿಜಯಪುರ,ಜೂ.14-ಪೊಲೀಸ್ ಇಲಾಖೆ ಹಾಗೂ ಪೊಲೀಸರ ಕಾರ್ಯ ಕ್ಷಮತೆಯನ್ನು ಸುಧಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವ ನಡುವೆಯೇ ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿರುವ ಕಿಡಿಗೇಡಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿಜಯಪುರದ ಜಲನಗರ ಠಾಣೆಯ ಸಿಬ್ಬಂದಿ ಹಾಡುಹಗಲೇ ಠಾಣೆ ಆವರಣದಲ್ಲಿ ಬಾರ್ ಎಂಬಂತೆ ಕುಳಿತು ಮದ್ಯಪಾನ ಮಾಡಿ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಠಾಣೆಯ ಎಎಸ್‍ಐ ಮತ್ತು ಇಬ್ಬರು ಸಿಬ್ಬಂದಿ ಮಟಮಟ ಮಧ್ಯಾಹ್ನ ಠಾಣೆ ಆವರಣದಲ್ಲಿ ಮದ್ಯ ಸೇವಿಸುವುದಲ್ಲದೆ ಮಾಂಸದೂಟವನ್ನೂ ಮಾಡಿದ್ದಾರೆ.ವಿಶೇಷವೆಂದರೆ ಈ ಕಿಡಿಗೇಡಿ ಪೊಲೀಸರಿಗೆ ಸರ್ವರ್ ಆಗಿ ಸೇವೆ ಸಲ್ಲಿಸಿರುವುದು ಒಬ್ಬ ಮಹಿಳಾ ಸಿಬ್ಬಂದಿ ಎಂಬುದು ತೀರಾ ನೋವಿನ ವಿಷಯ. ಠಾಣೆಯಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಅನಿವಾರ್ಯವಾಗಿ ತನ್ನ ಮೇಲಧಿಕಾರಿ(ಎಎಸ್‍ಐ) ಎದುರು ಮಾತನಾಡಲು ಹೆದರಿ ಅವರ ಆದೇಶದಂತೆ ಗ್ಲಾಸ್‍ಗಳಿಗೆ ಮದ್ಯ ಸುರಿದು ಕೊಡುವುದು , ಆವರಣದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ಕುಡಿಯುವಂತೆ ಚೇರ್‍ಗಳಲ್ಲಿ ಕುಳಿತು ಎಎಸ್‍ಐ ಮತ್ತು ಇಬ್ಬರು ಸಿಬ್ಬಂದಿಗಳು ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿರುವ ದೃಶ್ಯಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಎಎಸ್‍ಐ ಸಾಹೇಬರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಕುಳಿತು ಮದ್ಯದ ಮಜಾ ಅನುಭವಿಸುತ್ತಿದ್ದರೆ, ಪಾಪಾ… ಆ ಬಡಪಾಯಿ ಮಹಿಳಾ ಪೇದೆ ಬಾಯಿ ಮುಚ್ಚಿಕೊಂಡು ಅವರು ಕೇಳಿದಂತೆ ಮದ್ಯ, ಸಿಗರೇಟ್, ಸೈಡ್ಸ್‍ಗಳನ್ನು (ಮಿರ್ಚಿ ಇತ್ಯಾದಿ) ಪೂರೈಕೆ ಮಾಡುತ್ತಿರುವುದು ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಈ ದೃಶ್ಯವನ್ನು ನೋಡಿ ನಾಗರಿಕರು ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin