ಎಂ.ಕೃಷ್ಣಪ್ಪಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

 

M-Krishnappaಬೆಂಗಳೂರು, ಸೆ.2- ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರನ್ನು ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಫರ್ಮಾನು ಹೊರಡಿಸಿದೆ ಎಂದು ಹೈಕಮಾಂಡ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.  ಸಚಿವ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗರ ಕೋಟಾದಡಿ ಯಾರಿಗೆ ಅವಕಾಶ ನೀಡಬೇಕೆಂಬ ಜಿಜ್ಞಾಸೆಯಲ್ಲಿದ್ದರು. ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಸಂಪುಟ ಸ್ಥಾನ ವಂಚಿತರಾಗಿದ್ದ ಎಂ.ಕೃಷ್ಣಪ್ಪ ಅವರಿಗೆ ಈ ಬಾರಿ ಅವಕಾಶ ಕಲ್ಪಿಸಿ.

ಪಕ್ಷ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಎಚ್.ಮುನಿಯಪ್ಪ, ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಮುಂತಾದ ವರಿಷ್ಠರು ಒಲವು ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೂಡ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಒಕ್ಕಲಿಗರ ವಿರೋಧಿ ಎಂಬ ಹಣೆಪಟ್ಟಿ ತಮಗಿದೆ. ತಾವು ಅದರಿಂದ ಹೊರಬರಬೇಕಾದರೆ ಪ್ರಭಾವಿ ಒಕ್ಕಲಿಗ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಅನ್ಯ ಪಕ್ಷಗಳಿಂದ ಬಂದವರಿಗೆ ಅವಕಾಶ ನೀಡುವುದಕ್ಕಿಂತ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಹಿರಿಯ ಮುಖಂಡರಿಗೆ, ಪ್ರಭಾವಿಗಳಿಗೆ ಅವಕಾಶ ನೀಡಿದರೆ ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯ ಇಮೇಜ್ ಬರುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೂಡ ಎಂ.ಕೃಷ್ಣಪ್ಪ ಅವರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೆ.ಜೆ.ಜಾರ್ಜ್ ಅವರಿಗಾಗಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಒಕ್ಕಲಿಗರ ಕೋಟಾವನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಬಾರಿಯಂತೆ ಯಾವುದೇ ಗೊಂದಲ ಸೃಷ್ಟಿ ಮಾಡುವುದು ಬೇಡ. ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿರುವ ಪಕ್ಷನಿಷ್ಠ ಶಾಸಕರೂ ಆದ ಎಂ.ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಸೂಚನೆಯನ್ನು ಹೈಕಮಾಂಡ್ ನೀಡಿದೆ. ಈ ಬಗ್ಗೆ ನಿನ್ನೆ ತಡರಾತ್ರಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಹಲವು ಗಣ್ಯರು ಮಾತುಕತೆ ನಡೆಸಿ, ಇಂದು ಬೆಳಗ್ಗೆ ನವದೆಹಲಿಗೆ ತೆರಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಕೂಗೆದ್ದಾಗ ಹಲವು ಒಕ್ಕಲಿಗ ಶಾಸಕರ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಈಗ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ರಾಜ್ಯದ ಬಹುತೇಕ ಒಕ್ಕಲಿಗ ಮುಖಂಡರು ಎಂ.ಕೃಷ್ಣಪ್ಪ ಅವರ ಬೆಂಬಲಕ್ಕೆ ನಿಂತಿದ್ದು, ಭವಿಷ್ಯದ ಕಾಂಗ್ರೆಸ್ನ ಬಲವರ್ಧನೆಗಾಗಿ ಇವರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.ಬೆಂಗಳೂರು ಮಹಾನಗರದ ಉಸ್ತುವಾರಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸದ್ಯ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರಿಂದ ತೆರವಾಗಿರುವ ಜಾಗಕ್ಕೆ ಮತ್ತೊಬ್ಬ ಪ್ರಭಾವಿ ಮುಖಂಡರಾದ ಎಂ.ಕೃಷ್ಣಪ್ಪ ಅವರನ್ನು ನೇಮಕ ಮಾಡುವುದು ಸೂಕ್ತ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಹೈಕಮಾಂಡ್ ಜತೆ ನಾಯಕರು ಚರ್ಚೆ ನಡೆಸಲಿದ್ದಾರೆ.

ಕಳೆದ ಬಾರಿ ಸಂಪುಟ ಪುನಾರಚನೆ ವೇಳೆ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿ ಕೃಷ್ಣಪ್ಪ ಅವರ ಹೆಸರಿತ್ತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಮಾಣವಚನಕ್ಕೆ ತಯಾರಿರುವಂತೆ ದೂರವಾಣಿ ಕರೆ ಮಾಡಿ ಹೇಳಿದ್ದರು. ವಿಜಯನಗರದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಆದರೆ, ಕೊನೆ ಕ್ಷಣದಲ್ಲಿ ನಡೆದ ರಾಜಕೀಯ ಬೆಳವಣಿಗಳಲ್ಲಿ ಸಂಭ್ರಮಾಚರಣೆ ನಿರಾಸೆಯಾಗಿ ಮಾರ್ಪಟ್ಟು ಬಹಳಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಈಗ ಅಸಮಾಧಾನ, ಅತೃಪ್ತಿಯನ್ನು ಶಮನ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹೈಕಮಾಂಡ್ ವರಿಷ್ಠರು ಎಂ.ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದು, ಇಂದು ಮತ್ತು ನಾಳೆ ನಡೆಯಲಿರುವ ಮಹತ್ವದ ಮಾತುಕತೆಯಲ್ಲಿ ಚರ್ಚೆಗೆ ಬರಲಿದೆ.

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೊದಲು ಅವರು ಬಿಜೆಪಿಗೂ ಹೋಗಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹಲವರು ಒಲವು ತೋರಿದ್ದರೂ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಎಂ.ಕೃಷ್ಣಪ್ಪ ಅವರು ಸಚಿವರಾಗುವ ಕನಸು ನನಸಾಗುವ ಸಾಧ್ಯತೆ ಇದೆ.   ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್ನಲ್ಲಿ ಕೊನೆ ಕ್ಷಣದವರೆಗೂ ಯಾವ ನಿರ್ಧಾರಗಳನ್ನೂ ಹೇಳಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯಾಗಿ ಪ್ರಮಾಣವಚನವಾಗುವವರೆಗೂ ಅಧಿಕೃತವಾಗಿ ಯಾರು ಸಚಿವರಾಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ… ಏನಾಗುತ್ತದೆಯೋ ಕಾದು ನೋಡಬೇಕು….

► Follow us on –  Facebook / Twitter  / Google+

Facebook Comments

Sri Raghav

Admin