ಎಐಎಡಿಎಂಕೆಯಿಂದ ಶಶಿಕಲಾ ಔಟ್..?

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಚೆನ್ನೈ, ಸೆ.12- ದಿನಕ್ಕೊಂದು ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತಿರುವ ತಮಿಳುನಾಡು ರಾಜಕಾರಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಹಾಗೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್(ಚಿನ್ನಮ್ಮ) ಅವರನ್ನು ಪಕ್ಷದಿಂದ ಕೊನೆಗೂ ಹೊರದಬ್ಬುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.  ಚೆನ್ನೈನಲ್ಲಿ ಇಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದರೊಂದಿಗೆ ತಮ್ಮ ಸರ್ಕಾರದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವ ಶಶಿಕಲಾರ ಸೋದರ ಸಂಬಂಧಿ ಹಾಗೂ ಪಕ್ಷದ ಭಿನ್ನಬಣದ ನಾಯಕ ಟಿಟಿವಿ ದಿನಕರ್‍ಗೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.  ಈ ಹಿಂದೆ ಪಳನಿಸ್ವಾಮಿ ಬಣ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಬಣದ ಒಮ್ಮತದ ನಿರ್ಧಾರದಂತೆ ಶಶಿಕಲಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.   ಚಿನ್ನಮ್ಮ ಅವರನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ದಿನಕರನ್ ಬಣದ ನೈತಿಕ ಬಲವನ್ನು ಅಡಗಿಸುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಳನಿ ವಿರುದ್ಧ ಈಗಾಗಲೇ ದಿನಕರನ್ ಬಣದ 20ಕ್ಕೂ ಹೆಚ್ಚು ಶಾಸಕರು ತಿರುಗಿಬಿದ್ದು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆದಿದ್ದಾರೆ. ಶಶಿಕಲಾರನ್ನು ವಜಾಗೊಳಿಸಿದ ನಂತರ ಕಂಡುಬರುವ ಬೆಳವಣೆಗೆಯನ್ನು ಆಧರಿಸಿ ವಿಲೀನಗೊಂಡ ಎರಡು ಬಣಗಳು ಮುಂದಿನ ಹೆಜ್ಜೆ ಇಡಲಿದೆ.

ದಿನಕರನ್‍ಗೆ ಮುಖಭಂಗ :

ಎಐಎಡಿಎಂಕೆಯ ಇಂದಿನ ಸಭೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ದಿನಕರನ್ ಬಣದ ಬಂಡಾಯ ಶಾಸಕ ವೆಟ್ರಿವಲ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದೇ ಅಲ್ಲದೆ 1 ಲಕ್ಷ ರೂ. ದಂಡ ವಿಧಿಸಿದೆ. ಇದರಿಂದಾಗಿ ದಿನಕರನ್‍ಗೆ ಭಾರೀ ಮುಖಭಂಗವಾಗಿದೆ.  ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ.ವಿ.ಕಾರ್ತಿಕೇಯರ್ ನೇತೃತ್ವದ ಏಕ ಸದಸ್ಯ ಪೀಠ. ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯದೆ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದೆ. ಇದರಿಂದ ಕೋರ್ಟ್‍ಅನ್ನು ತಪ್ಪು ದಾರಿಗೆ ಎಳೆದು ಕಾಲ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು. ಶಾಸಕ ವೆಟ್ರಿವಲ್ ಇದಕ್ಕಾಗಿ 1 ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿತು.

Facebook Comments

Sri Raghav

Admin