ಎಕರೆಗೆ ತಲಾ 30-35 ಸಾವಿರ ಪರಿಹಾರ ನೀಡಲು ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

HDK

ಮಂಡ್ಯ, ಸೆ.8-ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡಿರುವ ಸರ್ಕಾರ ಎಕರೆಗೆ 30 ರಿಂದ 35 ಸಾವಿರ ರೂ. ಪರಿಹಾರ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಜನತೆಯಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಮೊದಲ ದಿನವೇ ನಾನು ಬರಬೇಕಿತ್ತು. ಆದರೆ ಪೊಲೀಸರು ನೀಡಿದ ಸೂಚನೆಯಂತೆ ಬರಲಾಗಲಿಲ್ಲ. 50 ವರ್ಷಗಳಿಂದ ಕಾವೇರಿಗಾಗಿ ದೇವೇಗೌಡರು ಹೋರಾಟ ನಡೆಸಿದ್ದಾರೆ ಎಂದು ಸ್ಮರಿಸಿದರು.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. 6.56 ಲಕ್ಷ ರೂ. ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಈ ರೈತರನ್ನು ಉಳಿಸುವ ಸಲುವಾಗಿ ಸರ್ಕಾರ ಪರಿಹಾರ ನೀಡಬೇಕು. ನ್ಯಾಯಾಕರಣದ ತೀರ್ಪಿಗಾಗಿ ಸಲ್ಲಿಸಿರುವ ಎಸ್‌ಎಲ್‌ಪಿ ವಿಚಾರಣೆ ಇದೇ 19 ರಂದು ನಡೆಯಲಿದೆ.

ಅಲ್ಲಿಯವರೆಗೂ ಕಾಯಬೇಕಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಆತ್ಮಹತ್ಯೆಯಂತಹ ಕುಕೃತ್ಯಗಳಿಗೆ ಮನಸ್ಸು ಮಾಡಬಾರದು ಎಂದು ತಿಳಿ ಹೇಳಿದರು.
ಇತ್ತೀಚೆಗೆ ನಡೆದ ಸರ್ವ ಪಕ್ಷ ಸಭೆಯಲ್ಲಿ 22 ಟಿಎಂಸಿ ನೀರನ್ನು ಆ.19ರಂದೇ ಬಿಡಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ ಎಂಬ ಬಗ್ಗೆ ನಮಗೆ ಅನುಮಾನವಿತ್ತು. ಮಂಡ್ಯದಲ್ಲಿ ಕಾವೇರಿ ನೀರು ನಿರ್ವಹಣಾ ಸಭೆ (ಐಸಿಸಿ) ನಡೆಯಬೇಕಿತ್ತು. ಆದರೆ ಇದೂ ಸಹ ನಡೆದಿಲ್ಲ. ಇದೀಗ ಉದ್ಭವಿಸಿರುವ ಪರಿಸ್ಥಿತಿಯಿಂದ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅಂತಹ ರೈತರ ಮೇಲೆ ಯಾವುದೇ ಕೇಸು ಹಾಕಬೇಡಿ. ಯಾರೊಬ್ಬರೂ ತಮ್ಮ ಮನೆಗಾಗಿ ಹೋರಾಟ ಮಾಡುತ್ತಿಲ್ಲ. ಬೆಳೆಗಾಗಿ, ಜನಕ್ಕಾಗಿ ಹೋರಾಟಕ್ಕಿಳಿದಿದ್ದಾರೆ ಎಂದು ಸಲಹೆ ಮಾಡಿದರು.

ಟ್ರಿಬ್ಯುನಲ್‌ನ್ನು ತಮಿಳುನಾಡು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದೆ. ಅವರ ಪರವಾಗಿ ತೀರ್ಪನ್ನು ಪಡೆಯುತ್ತಿದೆ. ಆದರೆ ನಮ್ಮ ಸರ್ಕಾರ ಇದರಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಅನ್ನದಾನಿ, ಎಂ.ಶ್ರೀನಿವಾಸ್, ಜಿಲ್ಲಾ ಜನತಾದಳ ಅಧ್ಯಕ್ಷ ರಮೇಶ್, ಅಶೋಕ್ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin