ಎಚ್ಚರಿಕೆ.! ಅಪ್ರಾಪ್ತ ಮಕ್ಕಳು ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅಪ್ಪ-ಅಮ್ಮ ಜೈಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

drink-and-Drive

ಬೆಂಗಳೂರು, ಅ.14- ಕುಡಿದು ವಾಹನ ಚಲಾಯಿಸಿ ಸಿಕ್ಕಿಬೀಳುವ ಅಪ್ರಾಪ್ತ ವಯಸ್ಕರ ಪೋಷಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಮುಂದಾಗಿರುವ ಸಂಚಾರಿ ಪೊಲೀಸರು ಅಪ್ರಾಪ್ತ ವಯಸ್ಕರಿಗೆ ಕಾರು, ಬೈಕು ಕೊಡುವ ಮುನ್ನ ಯೋಚಿಸಬೇಕಾದ ಪೋಷಕರು ಅದರಲ್ಲೂ ಅವರೆಲ್ಲ ಕುಡಿಯುವವರಾದರೆ ಅದನ್ನು ಗಂಭೀರವಾಗಿ ಪರಿಗಣಿಸಿ ವಾಹನ ಅವರ ಕೈಗೆ ಸಿಗದಂತೆ ಎಚ್ಚರ ವಹಿಸಬೇಕೆಂಬ ಗಂಭೀರ ಸಂದೇಶ ರವಾನಿಸಿದ್ದಾರೆ.  ಕುಡಿದು ವಾಹನ ಚಲಾಯಿಸಿ ಅಪ್ರಾಪ್ತ ವಯಸ್ಕರೇನಾದರೂ ಸಿಕ್ಕಿಬಿದ್ದರೆ ಅವರ ಬದಲಿಗೆ ಪೋಷಕರು ಜೈಲಿಗೆ ಹೋಗಬೇಕಾಗುತ್ತದೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಮರ ಸಾರಿರುವ ಸಂಚಾರಿ ಪೊಲೀಸರು ಕುಡಿದು ಪದೇ ಪದೇ ಸಿಕ್ಕಿಹಾಕಿಕೊಳ್ಳುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಿದ್ದಾರೆ. ಅಪ್ರಾಪ್ತ ವಯಸ್ಕರೇನಾದರೂ ಕುಡಿದು ಸಿಕ್ಕಿಬಿದ್ದರೆ ಅವರ ಪೋಷಕರು ಜೈಲಿಗೆ ಹೋಗಬೇಕಾಗುತ್ತದೆ. ಅಪ್ರಾಪ್ತ ವಯಸ್ಕರ ಕೈಗೆ ಗಾಡಿಗಳನ್ನು ಕೊಡುವ ಮುನ್ನ ಪೋಷಕರು ಇನ್ನು ಮುಂದೆ ಎಚ್ಚರ ವಹಿಸಬೇಕು. ಇಲ್ಲವೆ ಜೈಲಿಗೆ ಹೋಗಲು ಸಿದ್ಧರಾಗಿರಬೇಕು.

ಕುಡಿದು ವಾಹನ ಚಲಾಯಿಸುವವರ ವಾಹನ ಪರವಾನಗಿಯನ್ನು ಆರು ತಿಂಗಳು ಅಥವಾ ಪೂರ್ಣ ಪ್ರಮಾಣದಲ್ಲಿ ರದ್ದುಮಾಡಲಾಗುತ್ತಿದೆ. ಈ ಪ್ರಕರಣಗಳಲ್ಲಿ ಬಂಧಿತರಾದವರು ಅಧಿಕೃತವಾಗಿ ಕೋರ್ಟ್‍ನಲ್ಲಿ ಜಾಮೀನಿಗೆ ಅರ್ಜಿ ಹಾಕಬೇಕಾಗುತ್ತದೆ. ಆದರೆ, ಇವರಿಗೆ ಜೈಲು ಶಿಕ್ಷೆ ಕಾದಿದೆ. ಇನ್ನು ಮುಂದೆ ಮನೆಯಲ್ಲಿ ಲೈಸೆನ್ಸ್ ಮರೆತು ಬಂದೆ ಎಂದು ಹೇಳುವವರಿಗೂ ಕೂಡ ಶಿಕ್ಷೆಯಾಗಲಿದೆ.  ನಗರದಲ್ಲಿ ಕುಡಿದು ವಾಹನ ಚಲಾಯಿಸುವವರು ದಂಡ ಕಟ್ಟಲು ಯೋಚನೆ ಮಾಡುವುದಿಲ್ಲ. ಸಿಕ್ಕಿಹಾಕಿಕೊಂಡ ತಕ್ಷಣ ದಂಡ ಕಟ್ಟಿ ಹೋಗುವುದು ಸಾಮಾನ್ಯ. ಆದರೆ, ಅವರು ಕೇವಲ ತಮಗೆ ಹಾನಿ ಮಾಡಿಕೊಳ್ಳದೆ ಬೇರೆಯವರ ಜೀವನವನ್ನು ಅಪಾಯಕ್ಕೆ ತಳ್ಳುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ 4 ಸಾವಿರಕ್ಕೂ ಹೆಚ್ಚು ವಾಹನ ಚಾಲನಾ ಪರವಾನಗಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ರದ್ದು ಮಾಡಲು ಶಿಫಾರಸು ಮಾಡಲಾಗಿದೆ. ಮೊದಲೆಲ್ಲ ಈ ಅಪರಾಧಕ್ಕೆ ವಾಹನ ಮತ್ತು ಲೈಸೆನ್ಸ್ ವಶಪಡಿಸಿಕೊಂಡು ಕೋರ್ಟ್‍ನಲ್ಲಿ ದಂಡ ಕಟ್ಟಿ ನಂತರ ಹಿಂಪಡೆಯಲು ತಿಳಿಸಲಾಗುತ್ತಿತ್ತು. ಆದರೆ, ಈಗ ಶಿಕ್ಷೆಯ ಮೊತ್ತ ಹೆಚ್ಚಿಸಲಾಗಿದೆ. ಇನ್ನು ಅಪ್ರಾಪ್ತರ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಪ್ರಾಪ್ತ ಮತ್ತು ಆತನಿಗೆ ವಾಹನ ನೀಡಿದ ಇಬ್ಬರ ಮೇಲೂ ದೂರು ದಾಖಲು ಮಾಡಿ ಅಪ್ರಾಪ್ತರನ್ನು ಬಂಧಿಸಿ ಬಾಲ ನ್ಯಾಯಾಲಯ ಮಂಡಳಿ ಮುಂದೆ ನಿಲ್ಲಿಸುವುದಲ್ಲದೆ ಪೋಷಕರ ವಿರುದ್ಧವೂ ಕೂಡ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತರಾದ ಎಸ್.ರೇಣುಕಾ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin