ಎಚ್.ಡಿ.ಕೆ ಭದ್ರಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

rngr
ರಾಮನಗರ, ನ.16-
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಭದ್ರಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಹಲವು ಕಾರ್ಯಕ್ರಮಗಳ ಶಿಲಾನ್ಯಾಸದ ಮೂಲಕ ಮಿಂಚಿನ ಸಂಚಲನ ನಡೆಸಿದರು.ಮುಂಬರುವ ಚುನಾವಣೆಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಈಗಾಗಲೇ ಸಮರಾಭ್ಯಾಸ ನಡೆಸುತ್ತಿವೆ. ಎಚ್.ಡಿ.ಕುಮಾರಸ್ವಾಮಿಯವರು ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಹೆಚ್ಚು ಬಲಗೊಳಿಸಲು ಸಕ್ರಿಯರಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಿರಂತರ ಸಭೆಗಳ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪರಿಶೀಲನೆ ಜತೆ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ತ್ವರಿತವಾಗಿ ನೆರವೇರಿಸುತ್ತಿದ್ದಾರೆ.

Ram-nagar
ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆಯೇ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗತೊಡಗಿವೆ. ಸರ್ಕಾರವು ಕೂಡ ಅಭಿವೃದ್ಧಿ ಕಾಮಗಾರಿಗಳನ್ನು ಹರಿಬಿರಿಯಲ್ಲಿ ಉದ್ಘಾಟನೆ ಮಾಡುತ್ತಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಎಂ ರಸ್ತೆ ರಾಮನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಉದ್ಘಾಟನೆ ನೆರವೇರಿಸಿದರು. ನಂತರ ಚನ್ನಪಟ್ಟಣ ತಾಲೂಕು ಕನ್ನಮಂಗಲ ಗ್ರಾಮದ ಕೆಂಗಲ್ ಕಣ್ವ ಮಾರ್ಗದಲ್ಲಿ ಕರ್ನಾಟಕ ಹಾಲು ಮಂಡಳಿ ಹಾಲಿನ ಉತ್ಪನ್ನ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕನಕಪುರದ ಶಿವನಗರದ ಬಮೂಲ್‍ನ ಕನಕಪುರ ಡೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ, 63ನೆ ಅಖಿಲ ಭಾರತ ಸಹಕಾರ ಸಪ್ತಾಹ-2016ದಲ್ಲಿ ಭಾಗವಹಿಸಿದ್ದರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಒಟ್ಟಾರೆ ಆಡಳಿತ ಯಂತ್ರ ಸಂಪೂರ್ಣ ರಾಮನಗರ ಜಿಲ್ಲೆಗೆ ದಾಂಗುಡಿ ಇಟ್ಟಂತಿತ್ತು.ಮುಖ್ಯಮಂತ್ರಿಗಳ ಜತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಮಹದೇವಪ್ಪ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಪಿ.ರಾಜೇಶ್, ಸಂಸದರಾದ ಡಿ.ಕೆ.ಸುರೇಶ್, ವೀರಪ್ಪಮೊಯ್ಲಿ, ಶಾಸಕರಾದ ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಡಾ.ಕೆ.ಶ್ರೀನಿವಾಸಮೂರ್ತಿ, ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin