ಎದ್ದು ನಿಲ್ಲಿಸಿ ಸಿದ್ಧನಿಗೆ ಚಿಕೆತ್ಸೆ
ಸುಮಾರು 60 ದಿನಗಳ ನಂತರ ಮಾಗಡಿ ತಾಲ್ಲೂಕಿನ ಮಂಚನಬೆಲೆ ಬಳಿ ಅಸ್ವಸ್ಥಗೊಂಡಿರುವ ಕಾಡಾನೆ ಸಿದ್ಧನನ್ನು ವಿಶೇಷ ತಂತ್ರಜ್ಞಾನ ಬಳಸಿ ಭಾರತೀಯ ಸೇನೆಯ ಮದರಾಸ್ ಎಂಜಿನಿಯರಿಂಗ್ ಗ್ರೂಪ್ನ ಯೋಧರು ಆವೇರಹಳ್ಳಿ ಬಳಿ ಶಿಬಿರ ಸ್ಥಾಪಿಸಿ ನಿಲ್ಲಿಸಿದ್ದಾರೆ. ಕ್ರೇನ್ ಸಹಾಯಿಂದ ಎದ್ದು ನಿಲ್ಲಿಸಲಾಗಿದ್ದು, ಸಿದ್ದನ ಉಳಿವಿಗೆ ಕೊನೆಯ ಪ್ರಯತ್ನ ಎಂಬಂತೆ ಕಬ್ಬಿಣದ ಗೋಡೆಗಳ ನಡುವೆ ‘ಬಂಧಿಸಿ’ ಚಿಕಿತ್ಸೆ ನೀಡಲು ವೈದ್ಯರ ತಂಡ ಮುಂದಾಗಿದೆ. ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್(ಎಂಇಜಿ) ಯೋಧರು ಮಂಚನಬೆಲೆಯಲ್ಲಿ ಆನೆಯ ಚಿಕಿತ್ಸೆಗೆ ಅನುವಾಗುವಂತೆ ಬೃಹತ್ತಾದ ಕಬ್ಬಿಣದ ಕಂಬಗಳಿಂದ ಚೌಕಾಕಾರದ ಗೋಪುರವನ್ನು ನಿರ್ಮಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸೇತುವೆಯನ್ನು ನಿರ್ಮಿಸಲು ಬಳಸಲಾಗುವ ಸಾಮಗ್ರಿಗಳನ್ನು ಬಳಸಿಕೊಂಡು ಯೋಧರು ಈ ವ್ಯವಸ್ಥೆ ಮಾಡಿಕೊಂಡಿದ್ದು, ಇಂದು ಕ್ರೇನ್ ಮೂಲಕ ಚೌಕಾಕಾರದ ಆಕೃತಿಯ ಮಧ್ಯ ಸಿದ್ಧನನ್ನು ನಿಲ್ಲಸಲಾಗಿದೆ. ಸಿದ್ದನನ್ನು ಕಬ್ಬಿಣದ ಕಂಬಿಗಳಿಂದ ಕಟ್ಟಿ ಹಾಕಲಾಗಿದ್ದು, ಆನೆ ಯಾವುದೇ ಕಾರಣಕ್ಕೂ ನೆಲಕ್ಕೆ ಕೂರದಂತೆ ನೋಡಿಕೊಂಡು, ನಿಂತ ಭಂಗಿಯಲ್ಲಿಯೇ ಅದಕ್ಕೆ ಚಿಕಿತ್ಸೆ ಮುಂದುವರಿಸಲು ವೈದ್ಯರ ತಂಡ ನಿರ್ಧರಿಸಿದೆ.
ಕಾಡಾನೆ ಸಿದ್ದನಿಗೆ ಆತ ನಿಂತ ಭಂಗಿಯಲ್ಲಿಯೇ ಚಿಕಿತ್ಸೆ ನೀಡುವ ಕಾರ್ಯವನ್ನು ಡಾ. ಅರುಣ್ ನೇತೃತ್ವದ ವೈದ್ಯರ ತಂಡವು ಬುಧವಾರ ಆರಂಭಿಸಿತು. ಸಂಜೆ 7ರ ಸುಮಾರಿಗೆ ಕ್ರೇನ್ಗಳ ಸಹಾಯದಿಂದ ಸಿದ್ದನನ್ನು ಮೇಲಕ್ಕೆ ಎತ್ತಿ ನಿಲ್ಲಿಸಲಾಯಿತು. ಬಳಿಕ ಆತನನ್ನು ಚೌಕಾಕಾರದ ಗೋಪುರದ ಒಳಗೆ ನಿಲ್ಲಿಸುವ ಪ್ರಕ್ರಿಯೆ ನಡೆಯಿತು. ಕಾಡಾನೆಯ ಹೊಟ್ಟೆಗೆ ದೊಡ್ಡದಾದ ಬೆಲ್ಟ್ಕಟ್ಟಲಾಗಿದ್ದು, ಅದು ಆದಷ್ಟೂ ನಿಲ್ಲುವಂತೆ ಮಾಡಿ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಡಾ. ಅರುಣ್ ತಿಳಿಸಿದರು.
‘ಆನೆಯು ಮಲಗಿರುವ ಸ್ಥಿತಿಯಲ್ಲಿ ಇದ್ದರೆ ಕೀವು ಒಳಗೆಹೋಗುತ್ತದೆ. ಇದರಿಂದ ಚಿಕಿತ್ಸೆಗೆ ಅಡ್ಡಿಯಾಗುತ್ತಿತ್ತು, ಇದೀಗ ಚಿಕಿತ್ಸೆಗೆ ಅನುಕೂಲವಾಗಿದೆ’ ಎಂದು ಡಾ. ಅರುಣ್ ತಿಳಿಸಿದರು. ‘20X15 ಅಡಿ ವಿಸ್ತೀರ್ಣದ ಈ ಸೇತುವೆಯನ್ನು ಸುಮಾರು 4 ಅಧಿಕಾರಿಗಳು ಹಾಗೂ 20 ಸಿಬ್ಬಂದಿ ಸೇರಿ ನಿರ್ಮಿಸಿದ್ದೇವೆ. ಒಮ್ಮೆ ಆನೆಯು ಒಳಹೊಕ್ಕ ನಂತರ ಅದನ್ನು ಸೂಕ್ತ ರೀತಿಯಲ್ಲಿ `ಬಂಧಿಸುತ್ತೇವೆ. ನಮ್ಮಲ್ಲಿನ ಕೆಲವು ಸಿಬ್ಬಂದಿ ಇಲ್ಲಿಯೇ ಇದ್ದು, ಚಿಕಿತ್ಸೆ ಮುಂದುವರಿಸಲಿದ್ದಾರೆ’ ಎಂದು ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನ ಕರ್ನಲ್ ರವಿಚಂದ್ರನ್ ಹೇಳಿದರು.
► Follow us on – Facebook / Twitter / Google+