ಎನಿ ಟೈಮ್ , ಏನಿ ವೇರ್ ಭ್ರಷ್ಟರ ಭೇಟೆಗೆ ಎಸಿಬಿ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

ACB

ಬೆಂಗಳೂರು, ಆ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿದ್ದ ದುಬಾರಿ ವಾಚ್ ಪ್ರಕರಣದಲ್ಲಿ ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ಈವರೆಗೂ ಎಫ್‍ಐಆರ್ ದಾಖಲಿಸಿಲ್ಲ ಎಂದು  ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಗಗನ್‍ದೀಪ್ ಸ್ಪಷ್ಟಪಡಿಸಿದ್ದಾರೆ.  ಲೋಕಾಯುಕ್ತ ತನಿಖೆಗೆ ಆದೇಶಿಸಲಾಗಿದ್ದ ವಾಚ್ ಹಗರಣವನ್ನು ಎಸಿಬಿ ಸ್ಥಾಪನೆ ನಂತರ ಹೊಸ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಎಸಿಬಿ ಘಟಕ ತನಿಖೆ ನಡೆಸುತ್ತಿದ್ದು, ಈವರೆಗೂ ಪ್ರಾಥಮಿಕ ಹಂತದಲ್ಲೇ ವಿಚಾರಣೆ ಇದೆ.  ಭ್ರಷ್ಟಾಚಾರ ನಿಗ್ರಹ ಕಾಯ್ದೆ 1998ರ ಅನ್ವಯ ಯಾವುದೇ ದೂರು ಬಂದರೂ ಮೊದಲು ಎಫ್‍ಐಆರ್ ದಾಖಲಿಸಿ ತನಿಖೆ ಮುಂದುವರಿಸಬೇಕೆಂಬ ನಿಯಮವಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾದವರ ವಿರುದ್ಧ ದಾಳಿ ನಡೆಸಬೇಕಾದರೆ ಮೊದಲು ಎಫ್‍ಐಆರ್ ಕಡ್ಡಾಯ. ಲಂಚ ಸ್ವೀಕಾರ ಆರೋಪ ಕೇಳಿಬಂದಾಗ ಆರೋಪಿಯ ಬಂಧನಕ್ಕೂ ಮುನ್ನ ಎಫ್‍ಐಆರ್ ದಾಖಲಿಸಬೇಕೆಂಬ ನಿಯಮವಿದೆ.   ಎಸಿಬಿ ಭ್ರಷ್ಟಾಚಾರ ನಿಗ್ರಹ ದಳ ಕಾಯ್ದೆ ಅನುಸಾರ ಕೆಲಸ ಮಾಡುತ್ತದೆ. ಈವರೆಗೂ 27 ಪ್ರಕರಣಗಳನ್ನು ದಾಖಲಿಸಿ 21 ಮಂದಿಯನ್ನು ಬಂಧಿಸಿದೆ.  ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಆರು ಪ್ರಕರಣಗಳನ್ನು ದಾಖಲಿಸಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. 245 ದೂರುಗಳನ್ನು ಸ್ವೀಕರಿಸಲಾಗಿದೆ. ಮೈಸೂರಿನಲ್ಲಿ ಐದು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿ, 86 ದೂರು ಸ್ವೀಕರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ಕಲಬುರಗಿಯಲ್ಲಿ ತಲಾ ಎರಡು ಪ್ರಕರಣ ದಾಖಲಿಸಲಾಗಿದೆ.

ಗ್ರಾಮಾಂತರದಲ್ಲಿ ಒಬ್ಬನನ್ನು, ಕಲಬುರಗಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಮೂರು ದೂರು ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ಬೆಳಗಾಂನಲ್ಲಿ ತಲಾ ಒಂದು ದೂರು ದಾಖಲಿಸಿ ತಲಾ ಒಬ್ಬೊಬ್ಬರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಮತ್ತು ಹಾವೇರಿಯಲ್ಲಿ ತಲಾ ಒಂದು ದೂರು ದಾಖಲಿಸಲಾಗಿದ್ದು, ಯಾರನ್ನೂ ಬಂಧಿಸಿಲ್ಲ.

ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಯಾದಗಿರಿ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈವರೆಗೂ ಒಂದು ಪ್ರಕರಣ ದಾಖಲಾಗಿಲ್ಲ.  ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ 1016 ದೂರುಗಳನ್ನು ಸ್ವೀಕರಿಸಲಾಗಿದೆ. 2016 ಮಾ.19ರ ಆದೇಶದಂತೆ ಎಸಿಬಿ ಅಸ್ತಿತ್ವಕ್ಕೆ ಬಂದಿದ್ದು, ಇಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಸಿಬಿ ಘಟನಗಳನ್ನು ಉದ್ಘಾಟಿಸಲಾಗಿದೆ. ನಗರದ ಖನಿಜ ಭವನದಲ್ಲಿ ಈ ಎರಡೂ ಕಚೇರಿಗಳು ಕಾರ್ಯನಿರ್ವಹಿಸಲಿವೆ.  ಎಡಿಜಿಪಿ, ಐಜಿಪಿ ಕಚೇರಿಗಳು ಇದೇ ಕಟ್ಟಡದಲ್ಲಿ ಆರಂಭಗೊಂಡಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಇಂದು ಉದ್ಘಾಟನೆ ನೆರವೇರಿಸಿದರು.

ಅನಾಮಧೇಯ ಪತ್ರಕ್ಕೆ ಮನ್ನಣೆ ಇಲ್ಲ:

ಎಸಿಬಿ ಕರಾರುವಾಕ್ಕಿನ ಮಾಹಿತಿ ಮತ್ತು ದೂರು ಆಧರಿಸಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲಿದೆ. ಅನಾಮಧೇಯ ಪತ್ರ ಆಧರಿಸಿ ಕ್ರಮ ಜರುಗಿಸುವುದಿಲ್ಲ. ಆದರೆ, ಅಂತಹ ಪತ್ರಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಲಾಗುವುದು. ದೂರಿನಲ್ಲಿರುವ ಅಂಶ ಖಚಿತಪಟ್ಟರೆ ಕ್ರಮ ಜರುಗಿಸಲಾಗುವುದು ಎಂದರು.
ಭ್ರಷ್ಟಾಚಾರ ನಿಗ್ರಹಕ್ಕಾಗಿಯೇ ಪ್ರತ್ಯೇಕ ಮಾಹಿತಿ ಘಟಕ ಆರಂಭಿಸಲಾಗಿದೆ. ಪೊಲೀಸರ ವಿರುದ್ಧ ದೂರು ಬಂದರೂ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಈವರೆಗೂ ನಡೆದಿರುವ ಕಾರ್ಯಾಚರಣೆಯಲ್ಲಿ ಬೀದರ್ ಜಿಲ್ಲೆಯ ತಹಸೀಲ್ದಾರ್ ಒಬ್ಬನನ್ನು ಬಂಧಿಸಲಾಗಿದೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಮಧ್ಯವರ್ತಿಗಳ ವಿರುದ್ಧ ಪಿಸಿ ಕಾಯ್ದೆಯ 120 ಬಿ ಅಡಿ ಕ್ರಮ ಜರುಗಿಸಲಾಗುವುದು ಎಂದು ಗಗನ್‍ದೀಪ್ ಮಾಹಿತಿ ನೀಡಿದರು.
ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಎಸಿಬಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಶೇ.70ರಷ್ಟು ಸಿಬ್ಬಂದಿ ಭರ್ತಿಯಾಗಿದ್ದಾರೆ. ಇನ್ನೂ ಕೆಲವರು ವರ್ಗಾವಣೆಗೊಂಡಿದ್ದು, ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಶೀಘ್ರದಲ್ಲೇ ಅವರು ಕೂಡ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.  ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಸ್ಥಳೀಯ ಠಾಣೆಗಳಲ್ಲಿ ದೂರು ನೀಡಬಹುದು. ರಾಜ್ಯಾದ್ಯಂತ ಕೇಂದ್ರೀಕೃತವಾಗಿ ಸಹಾಯವಾಣಿಯನ್ನು ಇದಕ್ಕಾಗಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ 080-22342100 ಮೊಬೈಲ್ ಸಂಖ್ಯೆ, 9480806300ಗೆ ಬೆಳಗ್ಗೆ 10 ರಿಂದ ಸಂಜೆ 5.30ರ ನಡುವೆ ದೂರು ನೀಡಬಹುದು.  ಭ್ರಷ್ಟಾಚಾರ ಹಗರಣದಲ್ಲಿ ಸಿಕ್ಕಿಬಿದ್ದವರ ವಿಚಾರಣೆ ನಡೆಸಿ 24 ಗಂಟೆಯೊಳಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಪ್ರತ್ಯೇಕ ಲಾಕಪ್ ವ್ಯವಸ್ಥೆಗಳಿಲ್ಲದ ಕಾರಣ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳನ್ನಿರಿಸಿ ವಿಚಾರಣೆ ನಡೆಸಲಾಗುವುದು. ಇದಕ್ಕೆ ಆಯಾ ಠಾಣೆಗಳ ಎಸ್‍ಪಿಗಳು ಸಹಕಾರ ನೀಡಲಿದ್ದಾರೆ.

Facebook Comments

Sri Raghav

Admin