ಎನ್‍ಡಿಎ ಜೊತೆ ಅಧಿಕಾರಕ್ಕೇರಿದ ನಿತೀಶ್’ಗೆ ಆರಂಭದಲ್ಲೇ ನೂರೆಂಟು ವಿಘ್ನ ..!

ಈ ಸುದ್ದಿಯನ್ನು ಶೇರ್ ಮಾಡಿ

Nitish-Kumar--01

ನವದೆಹಲಿ, ಜು.27-ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಎನ್‍ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ ಆರಂಭದಲ್ಲೇ ನೂರೆಂಟು ವಿಘ್ನಗಳು ಎದುರಾಗಿವೆ. ಬಿಜೆಪಿ ಜತೆ ಸರ್ಕಾರ ರಚನೆ ಮಾಡಿಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡವಳಿಕೆಗೆ ಜೆಡಿಯು ಪಕ್ಷದ ಕೆಲವು ಮುಖಂಡರು ಅಪಸ್ವರ ನುಡಿದಿದ್ದಾರೆ. ಜೆಡಿಯುನ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಶರದ್‍ಯಾದವ್ ಹಾಗೂ ಮತ್ತೋರ್ವ ಸದಸ್ಯ ಅನ್ವರ್ ಆಲಿ ಸೇರಿದಂತೆ ಕೆಲ ಮುಖಂಡರು ನಿತೀಶ್‍ಕುಮಾರ್ ಬಿಜೆಪಿ ಜತೆ ದೋಸ್ತಿ ಮಾಡಿಕೊಂಡಿರುವುದಕ್ಕೆ ಕಿಡಿಕಾರಿದ್ದಾರೆ. ಬೆಳಗ್ಗೆ 10 ಗಂಟೆಗೆ ಅಧಿಕಾರ ಸ್ವೀಕರಿಸುವ ಮುನ್ನ ಜೆಡಿಯುನ ಕೆಲ ನಾಯಕರು ಟ್ವೀಟ್ ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಿತೀಶ್‍ಕುಮಾರ್ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನರೇಂದ್ರ ಮೋದಿ ಅವರ ಅನೇಕ ಯೋಜನೆಗಳು ಹಾಗೂ ಅವರ ಆಡಳಿತ ವೈಖರಿಯನ್ನು ನಾನೇ ಟೀಕಿಸಿದ್ದೇನೆ. ನೋಟು ಅಮಾನೀಕರಣ, ದಲಿತರ ಮೇಲಿನ ದೌರ್ಜನ್ಯ, ಗೋರಕ್ಷರ ಹಾವಳಿ ಸೇರಿದಂತೆ ಕೇಂದ್ರ ಸರ್ಕಾರದ ನಡವಳಿಕೆಯನ್ನು ಹಲವು ಬಾರಿ ಕಟುವಾಗಿ ಟೀಕಿಸಿದ್ದೆ.  ಈಗ ಅವರನ್ನೇ ಒಪ್ಪಿಕೊಳ್ಳಬೇಕೆಂದರೆ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಇದು ನಿತೀಶ್‍ಕುಮಾರ್ ಮಾಡಿದ ಬಹುದೊಡ್ಡ ಪ್ರಮಾದ ಎಂದು ಶರದ್‍ಯಾದವ್ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಮತ್ತೋರ್ವ ರಾಜ್ಯಸಭಾ ಸದಸ್ಯ ಅನ್ವರ್ ಆಲಿ ಕೂಡ ಬಿಜೆಪಿಗೆ ಬೆಂಬಲ ನೀಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ, ಹಲ್ಲೆ, ಕೊಲೆ, ಸುಲಿಗೆಯಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸುವ ನಾವು, ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿರುವ ಪಕ್ಷದ ಜತೆ ದೋಸ್ತಿ ಮಾಡಿಕೊಳ್ಳುವುದು ಹೇಗೆ ಎಂದು ಆಲಿ ಪ್ರಶ್ನಿಸಿದ್ದಾರೆ.

ಇನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಅಖಿಲೇಶ್‍ಯಾದವ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್‍ಸಿಂಗ್ ಸೇರಿದಂತೆ ಅನೇಕ ನಾಯಕರು ನಿತೀಶ್‍ಕುಮಾರ್ ನಡವಳಿಯನ್ನು ಪ್ರಶ್ನಿಸಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿತೀಶ್‍ಕುಮಾರ್ ರಾಜ್ಯದಲ್ಲಿ 6ನೆ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin