ಎಪಿಎಂಸಿ ಚುನಾವಣೆ : ಕಾಂಗ್ರೆಸ್-ಬಿಜೆಪಿ ಮೈತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಮಾ.10- ಕಳೆದ 18 ವರ್ಷಗಳಿಂದ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್, ಇದೀಗ ಬಿಜೆಪಿ ಸಹಕಾರದೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.ನಿನ್ನೆ ನಡೆದ ಎಪಿಎಂಸಿ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಭಾಗ್ಯಮ್ಮ ದಿವಾಕರ್ ಗೌಡ, ಉಪಾಧ್ಯಕ್ಷರಾಗಿ ಬಿಜೆಪಿ ಸುರೇಶ್‍ಗೌಡ ಆಯ್ಕೆಯಾದರೂ ಒಟ್ಟು 13 ಸ್ಥಾನಗಳ ಪೈಕಿ ಜೆಡಿಎಸ್ 6, ಕಾಂಗ್ರೆಸ್ 2, ಬಿಜೆಪಿ 5 ಸ್ಥಾನಗಳನ್ನು ಪಡೆದುಕೊಂಡಿದ್ದವು. ಆದರೆ ಸರ್ಕಾರದ ನಾಮನಿರ್ದೇಶಿತರಾಗಿ ಕಾಂಗ್ರೆಸ್‍ಗೆ ಮೂರು ಸದಸ್ಯರ ಬಲ ಸಿಕ್ಕಿತ್ತು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್‍ನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ತಂತ್ರ ಹೆಣೆದಿದೆ.

ಜೆಡಿಎಸ್‍ನಿಂದ ಬಿಬಿ ರಾಜಣ್ಣ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಅರ್ಜಿ ಸಲ್ಲಿಸಿದ್ದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ವೈ.ಎನ್.ರಾಜಣ್ಣ , ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ಅಭ್ಯರ್ಥಿಗಳಾಗಿದ್ದರೆ, ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಭಾಗ್ಯಮ್ಮ ದಿವಕರ್ ಗೌಡ ಕಣದಲ್ಲಿದ್ದರು. ಈ ನಡುವೆ ಒಪ್ಪಂದದಂತೆ ಬಿಜೆಪಿ ಬೆಂಬಲಿಗರ ನಿರ್ದೇಶಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ 10 ಮತ ಪಡೆದು ವಿಜಯಶಾಲಿಯಾದರೆ ಜೆಡಿಎಸ್‍ನ ಅಭ್ಯರ್ಥಿ 6 ಮತಗಳನ್ನು ಪಡೆದು ಪರಾಭವಗೊಂಡಿದ್ದರಿಂದ ಎಪಿಎಂಸಿ ಅಧಿಕಾರದ ಗದ್ದುಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಾಯಿತು.ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಕೆ.ರಮೇಶ್ ಕರ್ತವ್ಯ ನಿರ್ವಹಿಸಿದರು. ಯಾವುದೇ ಅಹಿತಕರ ಘಟನೆಯಾದಂತೆ ಸಿಪಿಐ ಬಾಳೇಗೌಡ ಬಂದೋಬಸ್ತ್ ವ್ಯವಸ್ಥೆ ಮಾಡಿದರು.

ಕ್ಷೇತ್ರದಲ್ಲಿ ಕಳೆದ ಸುಮಾರು 20 ವರ್ಷಗಳಿಂದಲೂ ಸ್ಥಳೀಯ ಸಂಸ್ಥೆಯ ಆಡಳಿತದ ಅಧಿಕಾರದ ಚುಕ್ಕಾಣಿ ಜೆಡಿಎಸ್‍ನ ಹಿಡಿತದಲ್ಲಿತ್ತು. ಆದರೆ ಇತ್ತೀಚೆಗೆ ಒಂದೊಂದೆ ಸಂಸ್ಥೆಗಳು ಜೆಡಿಎಸ್‍ನಿಂದ ಕೈ ತಪ್ಪಿ ಬಿಜೆಪಿ ಮತ್ತು ಕಾಂಗ್ರೆಸ್‍ನ ಪಾಲಾಗುತ್ತಿದೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆ ಕುಂಠಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು ನಿರ್ಲಕ್ಷ್ಯ ತೋರದೆ ತಮ್ಮ ನಾಯಕತ್ವದಲ್ಲೇ ಪಕ್ಷ ಸಂಘಟಿಸಲು ಮುಂದಾಗಬೇಕು ಹಾಗೂ ಈ ಕೂಡಲೇ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಸ್ಥಾನಗಳು ಗ್ರಾಮೀಣ ಪ್ರದೇಶಕ್ಕೆ ಬಿಡಬೇಕೆಂದು ಹಿರಿಯ ಜೆಡಿಎಸ್ ಮುಖಂಡರು ಒತ್ತಾಯಿಸಿದ್ದು ಇದೇ ರೀತಿ ಮುಂದುವರೆದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಆಘಾತವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin