ಎರಡು ಕೋಮುಗಳ ನಡುವೆ ಘರ್ಷಣೆ : ಬೆಳಗಾವಿ ಉದ್ವಿಗ್ನ

ಈ ಸುದ್ದಿಯನ್ನು ಶೇರ್ ಮಾಡಿ

Belagavi

ಬೆಳಗಾವಿ, ಅ.12- ವಿಜಯದಶಮಿ ಅಂಗವಾಗಿ ಮನೆಗಳ ಮೇಲೆ ಹಾರಿಸಿದ್ದ ಕೇಸರಿ ಧ್ವಜದ ಬಗ್ಗೆ ಉಂಟಾದ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿ ಎರಡು ಕೋಮುಗಳ ನಡುವೆ ತಡರಾತ್ರಿ ಘರ್ಷಣೆ ನಡೆದು ಹಲವು ವಾಹನಗಳು, ಮನೆಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚಿದ ಘಟನೆಯಿಂದ ಗಡಿ ಜಿಲ್ಲೆ ಬೆಳಗಾವಿ ಉದ್ವಿಗ್ನಗೊಂಡಿದೆ. ನಿನ್ನೆ ಕೆಲ ಹಿಂದೂಪರ ಸಂಘಟನೆಗಳು ನಗರದ ಚಾವಟಗಲ್ಲಿ , ದರ್‍ಬಾಗ್‍ಗಲ್ಲಿ, ಜಾಲ್‍ಗಾರ್‍ಗಲ್ಲಿ, ಖಂಜರಗಲ್ಲಿ ಸೇರಿದಂತೆ ನಗರದಾದ್ಯಂತ ಕೇಸರಿ ಧ್ವಜಗಳನ್ನು ಮನೆ ಮೇಲೆ ಹಾರಿಸಿ ಪಥಸಂಚಲನಕ್ಕೆ ತಯಾರಿ ನಡೆಸಿದ್ದವು.

 

Belagavi-1

ಇನ್ನೊಂದು ಕೋಮಿನ ಯುವಕರ ತಂಡ ಇದನ್ನು ವಿರೋಧಿಸಿ ದಿಢೀರ್ ಪ್ರತಿಭಟನೆಗೆ ಮುಂದಾಗಿತ್ತು. ಸಂಜೆವರೆಗೂ ಶಾಂತವಾಗಿದ್ದ ಕುಂದಾನಗರಿ ಏಕಾಏಕಿ ಉದ್ವಿಗ್ನಗೊಂಡಿತು. ಒಂದು ಗುಂಪಿನ ಜನರು ಕಲ್ಲು ತೂರಾಟ ನಡೆಸಿದರು. ಸರದಾರ್ ಮೈದಾನದ ಬಳಿ ಒಂದು ವ್ಯಾನ್ ಹಾಗೂ ಎರಡು ಬೈಕ್‍ಗಳಿಗೆ ಬೆಂಕಿ ಇಡಲಾಯಿತು. ಕಲ್ಲು ತೂರಾಟದಲ್ಲಿ 10 ಬೈಕ್ ಹಾಗೂ 4 ಕಾರುಗಳು, ಹಲವು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡವು. ಕೂಡಲೇ ಘಟನಾ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸ್ ಆಯುಕ್ತ ಕೃಷ್ಣಭಟ್, ಡಿಸಿಪಿಗಳಾದ ಜಿ.ರಾಧಿಕಾ, ಅಮರನಾಥರೆಡ್ಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಘಟನೆ ಸಂಬಂಧ ಇಬ್ಬರು ಪಾಲಿಕೆ ಸದಸ್ಯರಾದ ಮುಜಮಲ್ ಡೋಣಿ ಹಾಗೂ ಮತಿನ್ ಶೇಖ್ ಆಲಿ ಅವರನ್ನು ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 31 ಜನರನ್ನು ಪೊಲೀಸರು ಬಂಧಿಸಿದ್ದಾರೆ.  ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin