ಎಲೆಕ್ಷನ್ ತಯಾರಿ : ರಾಜ್ಯಸರ್ಕಾರದಿಂದ ಉಚಿತ ಅಡುಗೆ ‘ಅನಿಲ ಭಾಗ್ಯ’ ,

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--LPG

ಬೆಂಗಳೂರು,ಜೂ.1-ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತದಾರರ ಮೂಗಿಗೆ ತುಪ್ಪ ಸವರಲು ಮುಂದಾಗಿರುವ ಸರ್ಕಾರ ಉಚಿತ ಅಡುಗೆ ಅನಿಲ ಭಾಗ್ಯ ಒದಗಿಸಲು ಸಜ್ಜಾಗಿದೆ. ಬಡತನ ರೇಖೆಗಿಂತ(ಬಿಪಿಎಲ್) ಕೆಳಗಿರುವ ಕುಟುಂಬಗಳಿಗೆ ಈ ತಿಂಗಳಿನಿಂದ ಉಚಿತವಾಗಿ ಸರ್ಕಾರವೇ ಗ್ಯಾಸ್ ಮತ್ತು ಸಿಲಿಂಡರ್ ಒದಗಿಸಲಿದೆ.   ಕೇಂದ್ರ ಸರ್ಕಾರ ಈಗಾಗಲೇ ಉಜ್ವಲ ಯೋಜನೆ ಪ್ರಾರಂಭಿಸಿದೆ. ಈ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಉಚಿತವಾಗಿ ಅಡುಗೆ ಅನಿಲ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.ಕೇಂದ್ರ ಸರ್ಕಾರ ಗ್ಯಾಸ್ ಖರೀದಿಸಲು 1650 ರೂ. ಸಬ್ಸಿಡಿ ಹಣವನ್ನು ಫಲಾನುಭವಿಗಳಿಗೆ ನೀಡುತ್ತದೆ. ಇನ್ನು ರಾಜ್ಯ ಸರ್ಕಾರ ರಿಫೀಲ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಖರೀದಿಸಲು 500 ರೂ. ನೀಡಬೇಕಿತ್ತು. ಆದರೆ ಉಜ್ವಲ ಭವಿಷ್ಯ ಯೋಜನೆ ಅನುಷ್ಠಾನ ಮಾಡುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯ ಕೊರತೆಯಿಂದ ಈವರೆಗೂ ಜಾರಿಯಾಗಿಲ್ಲ.  ಉತ್ತರಪ್ರದೇಶದಲ್ಲಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಗೊಳಿಸಿ ಆರು ತಿಂಗಳಾಯಿತು. ಆದರೆ ರಾಜ್ಯದಲ್ಲಿ ಮಾತ್ರ ತಾಂತ್ರಿಕ ಕಾರಣಗಳಿಂದಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿರಲಿಲ್ಲ.

ಚುನಾವಣೆ ಮೇಲೆ ಕಣ್ಣು: ಈಗಿನ ಲೆಕ್ಕಚಾರದಂತೆ ಡಿಸೆಂಬರ್ ಇಲ್ಲವೇ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ವಿಧಾನಸಭೆ ಚುನಾವಣೆ ಬಹುತೇಕ ಖಚಿತವಾಗಿದೆ.
ಮತದಾರರನ್ನು ಓಲೈಸಿಕೊಳ್ಳಲು ಆಕರ್ಷಕ ಯೋಜನೆಗಳನ್ನು ಜಾರಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಪಿಎಲ್ ಕುಟುಂಬಗಳಿಗೆ ಅನಿಲಭಾಗ್ಯ ಯೋಜನೆ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.   ಈ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಅವರು ಒಟ್ಟು 10 ಲಕ್ಷ ಫಲಾನುಭವಿಗಳು ಇದರ ನೇರ ಲಾಭ ಪಡೆಯಲಿದ್ದಾರೆ. ಇದರಿಂದ ಬೊಕ್ಕಸಕ್ಕೆ 50 ಕೋಟಿ ಹೆಚ್ಚಿನ ಹೊರೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಹಣಕಾಸಿನ ಚಿಂತೆ ಬಿಟ್ಟು ಕೂಡಲೇ ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಅನಿಲಭಾಗ್ಯ ಯೋಜನೆಯಡಿ ಕುಟುಂಬಗಳಿಗೆ 1912 ರೂ. ಆರ್ಥಿಕ ನೆರವು ನೀಡಿ ಗ್ಯಾಸ್ ಸಂಪರ್ಕ ಒದಗಿಸಲಿದೆ.   ರಾಜ್ಯವನ್ನು ಸೀಮೆಎಣ್ಣೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂತಹ ದೃಢ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ ಮೇಲ್ನೋಟಕ್ಕೆ ಮತ ಭೇಟಿಯೂ ಇದರಲ್ಲಿ ಅಡಗಿದೆ ಎಂದು ಹೇಳಲಾಗುತ್ತಿದೆ.

14 ಕೆಜಿಯ ಅಡಿಗೆ ಅನಿಲ ಫಲಾನುಭವಿಗಳಿಗೆ ಲಭ್ಯವಾಗಿದ್ದು , ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಇದರ ಯೋಜನೆ ಪಡೆಯಬೇಕಾದರೆ ಫಲಾನುಭವಿಗಳು ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಚೀಟಿ ಹೊಂದಿರಲೇಬೇಕು.   ಪ್ರಸಕ್ತ ತಿಂಗಳಿನಿಂದಲೇ ಯೋಜನೆ ಆರಂಭವಾಗಲಿದ್ದು , ಈಗಾಗಲೇ ಹಲವು ಭಾಗ್ಯಗಳನ್ನು ಜನತೆಗೆ ಕರುಣಿಸಿರುವ ರಾಜ್ಯ ಸರ್ಕಾರ ಈ ಮೂಲಕ ಮತ ಸೆಳೆಯಲು ಹೊಸ ಹೊಸ ತಂತ್ರ ಅನುಸರಿಸುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin