ಎಲೆಕ್ಷನ್ ಮೂಡ್ ನಿಂದ ರಿಲ್ಯಾಕ್ಸ್ ಮೂಡ್‍ ಗೆ ಜಾರಿದ ರಾಜಕೀಯ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಮೇ 13- ಕಾಂಗ್ರೆಸ್ ನಾಯಕರು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಸಮೀಪದ ತಮ್ಮ ತೋಟದ ನಿವಾಸದಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಯಾವುದೇ ಟೆನ್ಷನ್ ಇಲ್ಲದೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.

ಭಾವನಾತ್ಮಕವಾಗಿ ಬೆಳಗ್ಗೆ ಟ್ವಿಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಪ್ರೀತಿಯ ಕಾರ್ಯಕರ್ತರೇ ಮತ್ತು ಹಿತಚಿಂತಕರೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನೀವೂ ನಮ್ಮಂತೆಯೇ ದಣಿದಿದ್ದೀರಿ ಎಂದು ಗೊತ್ತು. ಎಕ್ಸಿಟ್‍ ಪೋಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ. ಕುಟುಂಬದ ಜತೆ ಕಾಲ ಕಳೆಯಿರಿ. ಮೇ 15ರಂದು ಸಿಗೋಣ. ಹಿರಿಯರ ಆಶೀರ್ವಾದ, ಕಿರಿಯರ ಹಾರೈಕೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ.

ಇಂಧನ ಸಚಿವ ಹಾಗೂ ಪ್ರಚಾರ ಸಮಿತಿಯ ಹೊಣೆ ಹೊತ್ತಿದ್ದ ಡಿ.ಕೆ.ಶಿವಕುಮಾರ್ ಅವರು ರಾಜ್ಯಾದ್ಯಂತ ಪ್ರಚಾರ ಮಾಡಿ ದಣಿದಿದ್ದರು. ಇಂದು ರಿಲ್ಯಾಕ್ಸ್ ಮೂಡ್‍ನಲ್ಲಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಿರುವಷ್ಟೇ ಖಚಿತ. 130 ಸೀಟು ಬಂದೇ ಬರುತ್ತವೆ. ಯಾವುದೇ ಅನುಮಾನ ಬೇಡ. ನಾವೇ ಅಧಿಕಾರ ರಚಿಸುತ್ತೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ರಾಜ್ಯಾದ್ಯಂತ ಪ್ರಚಾರ, ಕೊರಟಗೆರೆ ಕ್ಷೇತ್ರದಲ್ಲಿ ನಿರಂತರ ಹೋರಾಟದಿಂದ ತೀವ್ರ ದಣಿದಿದ್ದು, ಚುನಾವಣೆ ಮುಗಿದ ನಂತರ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 120ಕ್ಕೂ ಹೆಚ್ಚು ಸ್ಥಾನಗಳು ಕಾಂಗ್ರೆಸ್‍ಗೆ ಬರುತ್ತವೆ. ಕಳೆದ ಬಾರಿ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ 122 ಸ್ಥಾನಗಳು ಬರುತ್ತವೆ ಎಂದು ಹೇಳಿದ್ದೆ. ಅದು ನಿಜವಾಗಿತ್ತು. ಈಗಲೂ ಕೂಡ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರ ಕರ್ನಾಟಕದಾದ್ಯಂತ ಭಾರೀ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ದಣಿದಿದ್ದರು. ನಿನ್ನೆಯಿಂದ ವಿಶ್ರಾಂತಿಯಲ್ಲಿರುವ ಅವರು ಕೂಡ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಪಕ್ಷದ ಉಸ್ತುವಾರಿಯಾಗಿರುವ ವೇಣುಗೋಪಾಲ್ ಅವರು ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿ ನಿರಂತರ ಪ್ರಚಾರ ಕಣದಲ್ಲಿ ತೊಡಗಿದ್ದಾರೆ.

ನಿನ್ನೆ ಕೇಂದ್ರ ಕಾರ್ಯಸ್ಥಾನದಲ್ಲಿ ಕುಳಿತು ಚುನಾವಣೆಯ ಸಂಪೂರ್ಣ ಮಾಹಿತಿ ಪಡೆದಿದ್ದು, ಯಾವ್ಯಾವ ಕ್ಷೇತ್ರದಲ್ಲಿ ಪಕ್ಷ ಗೆಲ್ಲಲಿದೆ ಎಂಬ ಮಾಹಿತಿಯನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ. ಅದೇ ರೀತಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಇಂದು ವಿಶ್ರಾಂತಿ ಮೂಡ್‍ನಲ್ಲಿದ್ದರು. ಕೆಲವರು ದೇವಸ್ಥಾನಗಳಿಗೆ ತೆರಳಿದರೆ, ಮತ್ತೆ ಕೆಲವರು ಪ್ರವಾಸ ಸ್ಥಳಗಳಿಗೆ ತೆರಳಿದ್ದರು. ಮೇ 15ರ ಫಲಿತಾಂಶ ಎಲ್ಲರಲ್ಲೂ ತವಕ ಉಂಟುಮಾಡಿದೆ. ಮೇಲ್ನೋಟಕ್ಕೆ ಏನೇ ಹೇಳಿದರೂ ಏನಾಗುತ್ತದೆಯೋ ಎಂಬ ಆತಂಕ ಒಳಗೆ ಇದ್ದೇ ಇದೆ.

Facebook Comments

Sri Raghav

Admin