ಅಧಿಕಾರಿಗಳು ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸಬೇಕು : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಮಾ.17-ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಐಎಎಸ್ ಅಧಿಕಾರಿಗಳು ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹಾರ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿರುವ ಐಎಎಸ್ ಅಧಿಕಾರಿ ಶ್ರೀವತ್ಸಕೃಷ್ಣ ಅವರ ವರ್ತನೆ ಸರಿಯಲ್ಲ. ಯಾವುದೇ ಅಧಿಕಾರಿಯಿರಲಿ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಮೊದಲು ಕನ್ನಡ ಕಲಿಯಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಶ್ರೀವತ್ಸ ಅವರು ಕನ್ನಡ ವಿರೋಧಿ ಧೋರಣೆ ತಳೆದಿರುವ ಬಗ್ಗೆ ಕೂಡಲೇ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಹೇಳಿದರು. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು. ಎಲ್ಲಾ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡ ವಿರೋಧಿ ಧೋರಣೆ ತಾಳಿದರೆ ಅದನ್ನು ನಮ್ಮ ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದರು. ಈ ಬಾರಿ ನಾವು ಮಂಡಿಸಿರುವ ಬಜೆಟ್ ಅತ್ಯುತ್ತಮ ಆಯವ್ಯಯವಾಗಿದ್ದು, ಇದನ್ನು ಸಹಿಸದ ವಿಪಕ್ಷಗಳು ಫೇಕ್‍ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ಕಲಾಪವನ್ನು ಹಾಳುಮಾಡುತ್ತಿವೆ ಎಂದು ಆರೋಪಿಸಿದರು.

ರಾಜಕೀಯ ದುರುದ್ದೇಶದಿಂದ ವಿಪಕ್ಷಗಳು ಇಲ್ಲದ ಡೈರಿ ವಿಚಾರವನ್ನು ಪ್ರಸ್ತಾಪ ಮಾಡಿ ಕಲಾಪವನ್ನು ಬಲಿಕೊಡುತ್ತಿದ್ದಾರೆ. ಅವರಿಗೆ ಜನರ ಸಮಸ್ಯೆ ನಿವಾರಣೆಗಿಂತ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಹರಿಹಾಯ್ದರು.  ನಿನ್ನೆ ಬಿಜೆಪಿ ಧರಣಿ ನಡೆಸಿದ ಸಂದರ್ಭದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು ಕೈಗೊಂಡ ತೀರ್ಮಾನ ಸೂಕ್ತವಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin