ಎಳ್ಳು-ಬೆಲ್ಲ ಹಂಚಿ ವಾಟಾಳ್ ನಾಗರಾಜ್ ಸಂಕ್ರಾಂತಿ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-NAgaraj--01

ಬೆಂಗಳೂರು, ಜ.15-ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ಅವರಿಗೆ ನೆರವಿಗೆ ಧಾವಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಆಗ್ರಹಿಸಿದರು. ಸಂಕ್ರಾಂತಿ ಹಬ್ಬದ ಇಂದು ಜೋಡೆತ್ತಿನ ಗಾಡಿಯಲ್ಲಿ ಕಬ್ಬಿನ ಜಲ್ಲೆ, ಎಳ್ಳು-ಬೆಲ್ಲ ಇಟ್ಟು ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡಿ ಬೆಳ್ಳು-ಬೆಲ್ಲ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿಕರ ಹಬ್ಬವಾದ ಸಂಕ್ರಾಂತಿ ಸಂದರ್ಭದಲ್ಲಿ ಕೃಷಿ ಸಮುದಾಯ ಸಂಕಷ್ಟದಲ್ಲಿದೆ. ನಾವೆಲ್ಲರೂ ಕೃಷಿಕರ ನೆರವಿಗೆ ಧಾವಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಬೇಕು.ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಹೇಳಿದರು.

ತಮಿಳುನಾಡು ಸರ್ಕಾರ ನೀರಿಗಾಗಿ ಒತ್ತಾಯಿಸಿ ಪತ್ರ ಬರೆದಿದೆ. ನಮ್ಮ ಡ್ಯಾಂನಲ್ಲಿ ನೀರಿಲ್ಲ. ಈ ಸಂದರ್ಭದಲ್ಲಿ ನೀರು ಬಿಟ್ಟರೆ ರಾಜ್ಯದಲ್ಲಿ ಮತ್ತೆ ದಂಗೆಯಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಕನ್ನಡ ನಾಡಿನ ಜನರಿಗೆ ಅವಮಾನವಾಗುವಂತಹ ಹೇಳಿಕೆಯನ್ನು ನೀಡಿದ್ದಾರೆ. ಮಹದಾಯಿಯಲ್ಲಿ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಬಂದು ನಮ್ಮ ಜನರ ಬಗ್ಗೆ ಅಗೌರವದ ಹೇಳಿಕೆ ನೀಡಲು ಅವರಿಗೆ ಎಷ್ಟು ಧೈರ್ಯವಿರಬೇಕು. ಅವರ ವಿರುದ್ಧ ನಾಳೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

Facebook Comments

Sri Raghav

Admin