ಎಷ್ಟು ಹೇಳಿದರು ಜನ ಹುಷಾರಾಗೊಲ್ಲ ರೀ.. ಈ ಮಹಿಳೆ ಕಥೇನೂ ಅಷ್ಟೇ..!
ತುಮಕೂರು, ಫೆ.9– ಯಾವುದೇ ಪಿನ್ ಅಥವಾ ನಿಮ್ಮ ಬ್ಯಾಂಕ್ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಪೊಲೀಸರು, ಸರ್ಕಾರ ಮತ್ತು ಬ್ಯಾಂಕ್ ನವರು ನಾನಾ ವಿಧದಲ್ಲಿ ಎಷ್ಟೇ ಎಚ್ಚರಿಕೆ ನೀಡಿದರು, ಜನ ಮೋಸ ಹೋಗುವುದು ತಪ್ಪಿಲ್ಲ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬಂತೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಎಟಿಎಂ ಪಿನ್ ಪಡೆದು ಆನ್ಲೈನ್ನಲ್ಲಿ 53,900 ರೂ. ದೋಚಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿಯ ರಾಜೀವ್ಗಾಂಧಿ ನಗರದ ಶಕೀಲ ಸಾದಿಕ್ಪಾಷ ಎಂಬುವವರೇ ವಂಚನೆಗೊಳಗಾದ ಮಹಿಳೆ.
ನಗರದ ಬಿಎಚ್ ರಸ್ತೆಯ ಐಡಿಬಿಐ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಇತ್ತೀಚೆಗೆ ಮನೆ ದುರಸ್ತಿ ಕಾರ್ಯಕ್ಕೆ ಗ್ರಾಮಶಕ್ತಿ ಸಂಘದಲ್ಲಿ 2 ಲಕ್ಷ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ಐಡಿಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ ಇಟ್ಟಿದ್ದಾರೆ. ಕಳೆದ ಜ.12ರಂದು ಅಪರಿಚಿತ ವ್ಯಕ್ತಿಯೊಬ್ಬ (9122408426) ಈ ನಂಬರ್ನ ಮೊಬೈಲ್ನಿಂದ ಕರೆ ಮಾಡಿ ಬ್ಯಾಂಕ್ನ ಪ್ರಧಾನ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಮತ್ತೆ ಚಾಲನೆ ಮಾಡಲು ನಿಮ್ಮ ಎಟಿಎಂ ಕಾರ್ಡ್ ಮೇಲಿರುವ 9 ನಂಬರ್ ಹಾಗೂ ಪಾಸ್ ವರ್ಡ್ ಹೇಳಿ ಎಂದು ಹಿಂದಿಯಲ್ಲಿ ಮಾತನಾಡಿ ವಿವರ ಪಡೆದುಕೊಂಡಿದ್ದಾನೆ.
ಜ.16ರಂದು ಶಕೀಲ ತನ್ನ ಪತಿ ಜತೆ ಬ್ಯಾಂಕಿಗೆ ಹೋದಾಗ ಖಾತೆಯಲ್ಲಿ ಹಣ ಕಡಿತವಾಗಿರುವುದು ತಿಳಿದು ಬಂದಿದೆ. ಬ್ಯಾಂಕಿನ ಅಧಿಕಾರಿಗಳನ್ನು ವಿಚಾರಿಸಿದಾಗ ಆನ್ಲೈನ್ನಲ್ಲಿ ಜ.12ರಂದು 53,900 ರೂ. ಡ್ರಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶಕೀಲ ಸಾದಿಕ್ಪಾಷ್ ದೂರು ನೀಡಿದ್ದು, ವಂಚಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS