ಎಸಿಬಿಗೆ ಹೊಸ ಮುಖ್ಯಸ್ಥರ ನೇಮಿಸಿರುವುದರ ಹಿಂದೆ ಯಾವುದೇ ಉದ್ದೇಶವಿಲ್ಲ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ಜ.1- ಎಸಿಬಿ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ಪ್ರತಿ ವರ್ಷ ಜನವರಿ 1ರಂದು ಸ್ವಾಭಾವಿಕವಾಗಿ ಬದಲಾವಣೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದರಲ್ಲದೆ ಈ ವರ್ಷ ಕಾನೂನು ಸುವ್ಯವಸ್ಥೆ ಶಾಂತಿಯಿಂದ ಇರಲಿ ಎಂದು ಆಶಿಸುತ್ತೇನೆ ಎಂದರು.  ಎಸಿಬಿಗೆ ಹೊಸ ಮುಖ್ಯಸ್ಥರ ಹಿಂದೆ ಯಾವುದೇ ಉದ್ದೇಶವಿಲ್ಲ. ಯಾರನ್ನೂ ರಕ್ಷಿಸಲು ಈ ವರ್ಗಾವಣೆ ಮಾಡಿಲ್ಲ. ಮೇಘರಿಕ್ ಅವರಿಗೆ ಅದೇ ದರ್ಜೆಯ ಹುದ್ದೆ ನೀಡಬೇಕೆಂಬ ಕಾರಣಕ್ಕೆ ಎಸಿಬಿ ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಪೊಲೀಸ್ ಇಲಾಖೆಯಲ್ಲಿನ ಕ್ರಮದಂತೆ ಈ ಬಾರಿಯೂ ರಾಜ್ಯದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಎಂದರು. ಎಲ್ಲ ಅಧಿಕಾರಿಗಳಿಗೂ ಈ ವೇಳೆ ಶುಭ ಕೋರಿದ ಅವರು, 2017ರಲ್ಲಿ ಕೆಲಸ ಮಾಡುವುದಷ್ಟೆ ನಮ್ಮ ಸಂಕಲ್ಪವಾಗಿರಲಿ ಎಂದು ಸಲಹೆ ಮಾಡಿದರು. ಅವರ ಹಣವನ್ನು ಅವರು ತೆಗೆದುಕೊಳ್ಳದಂತೆ ಹೇರಿರುವ ನಿಯಂತ್ರಣ ಸರಿಯಲ್ಲ. ಇದನ್ನು ಸಡಿಲಗೊಳಿಸುವ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೋಟು ಅಮೌಲ್ಯೀಕರಣದ ಬಗ್ಗೆ ಮೋದಿಯವರು ಏನನ್ನೂ ಮಾತನಾಡಿಲ್ಲ. ನೊಟ್‍ಬ್ಯಾನ್ ಮಾಡಿದ ಉದ್ದೇಶವೇನು? ಕದ್ದು ಮುಚ್ಚಿ ಮಾಡಿದ್ದು ಏಕೆ ಎಂಬುದನ್ನು ಹೇಳಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಏನು ಮಾಡತ್ತದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗಿದೆ ಎಂದು ನುಡಿದರು.  ಅವರ ಭಾಷಣ ತುಂಬ ನೀರಸವಾಗಿತ್ತು. ನಿನ್ನೆ ಬಜೆಟ್‍ನಲ್ಲಿ ಘೋಷಣೆ ಮಾಡುವಂತಹ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ ಅಷ್ಟೆ. ಫೆಬ್ರವರಿ 1ರಂದು ಬಜೆಟ್ ಮಂಡನೆ ವೇಳೆ ಇದನ್ನು ಘೋಷಿಸಬಹುದಿತ್ತು. ಅದನ್ನು ಈ ವೇಳೆ ಅಗತ್ಯವೇ ಇರಲಿಲ್ಲ ಎಂದು ಟೀಕಿಸಿದರು.

ನಂಜನಗೂಡು ಉಪ ಚುನಾವಣೆ:

ನಂಜನಗೂಡು ಉಪಚುನಾವಣೆ ಇರುವುದು ನಮಗೂ ತಿಳಿದಿದೆ. ಇದಕ್ಕೆ ನಮ್ಮದೇ ಆದ ರಣತಂತ್ರ ರೂಪಿಸುತ್ತೇವೆ. ಶ್ರೀನಿವಾಸ ಪ್ರಸಾದ್, ಜಯಪ್ರಕಾಶ್ ಹೆಗಡೆಯವರು ಬಿಜೆಪಿ ಸೇರಿದರೂ ಏನೂ ಸಮಸ್ಯೆಯಿಲ್ಲ ಎಂದರು. ನಾವು ಸಹ ನಮ್ಮ ಸಮರ್ಥ ಅಭ್ಯರ್ಥಿಯನ್ನು ಹಾಕುತ್ತೇವೆ. ಅಭ್ಯರ್ಥಿ ಆಯ್ಕೆಗಾಗಿಯೇ ವೀಕ್ಷಕರ ತಂಡ ರಚಿಸಲಾಗಿದೆ. ಅವರ ವರದಿ ಬಂದ ನಂತರ ಆಯ್ಕೆ ಅಂತಿಮ ಮಾಡಲಾಗುತ್ತದೆ ಎಂದು ತಿಳಿಸಿದರು. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಪಕ್ಷದ ವಿರುದ್ಧ ಜನಾರ್ದನ ಪೂಜಾರಿ ಹಾಗೂ ಎಚ್.ವಿಶ್ವನಾಥ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಈ ಇಬ್ಬರೂ ಪಕ್ಷಕ್ಕಾಗಿ ದುಡಿದವರು, ಹಿರಿಯರು. ಪಕ್ಷ ವಿರೋಧಿ ಹೇಳಿಕೆ ನೀಡದಂತೆ ಹಿಂದೆಯೂ ಸೂಚಿಸಲಾಗಿತ್ತು ಎಂದರು. ಅವರ ಹೇಳಿಕೆಗಳನ್ನು ಗಮನಿಸಿದರೆ ನೋವುಂಟಾಗುತ್ತದೆ. ಇದರ ಬಗ್ಗೆ ಹೈಕಮಾಂಡ್ ಗಮನಕ್ಕೂ ತರಲಾಗಿದೆ. ಅವರ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin