ಎಸೆಸೆಲ್ಸಿ ಫಲಿತಾಂಶ ಪ್ರಕಟ : ಇಲ್ಲೂ ಉಡುಪಿಯೇ ಫಸ್ಟ್, ಬೀದರ್ ಲಾಸ್ಟ್, ಬಾಲಕಿಯರೇ ಬೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

SSLC-Result

ಬೆಂಗಳೂರು, ಮೇ 12- ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲೆಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.8.5ರಷ್ಟು ಕುಸಿತ ಕಂಡು ಬಂದಿದೆ. ಒಟ್ಟಾರೆ ಶೇ.67.87ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ, ಆರು ವಿದ್ಯಾರ್ಥಿಗಳು 625ಕ್ಕೆ 624 ಹಾಗೂ 13 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದರು. 8,56,286 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,81,134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 924 ಶಾಲೆಗಳಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದ್ದರೆ, 60 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. 

4,56,147 ಬಾಲಕರು ಪರೀಕ್ಷೆ ಬರೆದಿದ್ದು, 2,84,708 ಉತ್ತೀರ್ಣರಾಗಿ ಶೇ.62.42ರಷ್ಟು ಫಲಿತಾಂಶ ಪಡೆದಿದ್ದರೆ, 4,00,139 ಬಾಲಕಿಯರಲ್ಲಿ 2,96,426 ವಿದ್ಯಾರ್ಥಿನಿಯರು ಪಾಸಾಗುವ ಮೂಲಕ ಶೇ.74.08ರಷ್ಟು ಫಲಿತಾಂಶ ಪಡೆಯುವ ಮೂಲಕ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ಕೃಷ್ಣಾನಗರಿ ಉಡುಪಿ ಮೊದಲನೆ ಸ್ಥಾನದಲ್ಲಿದ್ದರೆ, ಬೀದರ್ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.   ಉಡುಪಿ, ದಕ್ಷಿಣಕನ್ನಡ, ಚಿಕ್ಕೋಡಿ, ಶಿರಸಿ, ಉತ್ತರಕನ್ನಡ, ರಾಮನಗರ, ಕೋಲಾರ, ಧಾರವಾಡ, ಬೆಂಗಳೂರು ಗ್ರಾಮಾಂತರ, ಕೊಪ್ಪಳ ಹಾಗೂ ಚಾಮರಾಜನಗರ ಫಲಿತಾಂಶದಲ್ಲಿ ಮೊದಲ 10 ಸ್ಥಾನ ಪಡೆದುಕೊಂಡಿವೆ.
ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 22 ಕೊನೆ ದಿನ:

ಎಸ್ಸೆಸ್ಸೆಲ್ಸಿ ಫಲಿತಾಂಶ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಹಾಗೂ ಉತ್ತರ ಪತ್ರಿಕೆಯ ಪ್ರತಿ ಪಡೆಯುವವರು ಮೇ 22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.  ಮರು ಎಣಿಕೆಗೆ ಒಂದು ವಿಷಯಕ್ಕೆ 150ರೂ. ಶುಲ್ಕ, ಉತ್ತರ ಪತ್ರಿಕೆಯ ಛಾಯ ಪ್ರತಿ ಪಡೆಯಲು ಒಂದು ವಿಷಯಕ್ಕೆ 350ರೂ. ಶುಲ್ಕ ನಿಗದಿ ಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.  ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲೂ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತನ್ವೀರ್‍ಸೇಠ್ ಹೇಳಿದರು.

ಜೂನ್ 17ರಂದು ಪೂರಕ ಪರೀಕ್ಷೆ ನಡೆಯಲಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳು ಮೊದಲು ಅನುತ್ತೀರ್ಣರಾದ ಎರಡು ವರ್ಷದೊಳಗೆ ಅದೇ ವಿಷಯಗಳಿಗೆ ಮತ್ತೆ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ವಿದ್ಯಾರ್ಥಿ ಶಾಲಾ ಅಭ್ಯರ್ಥಿಯಾಗಿ ಪುನಃ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸಿದರೆ ಶಾಲೆಗೆ ಮರು ಪ್ರವೇಶ ಪಡೆಯಬಹುದಾಗಿದೆ.

ಟಾಪರ್ಸ್ :
ಬೆಂಗಳೂರು, ಮೇ 12- ಈ ಬಾರಿಯ ಎಸ್ಸೆಸ್ಸೆಲಿ ಫಲಿತಾಂಶದಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದಿದ್ದಾರೆ.
ಬಬಿತಾ, ಸೆಂಟ್ ಏಂಜೆಲ್ಸ್ ಸ್ಕೂಲ್, ಬೈಂದೂರು.
ವಚನಾ ರಾಘವೇಂದ್ರ, ಯುನೈಟೇಡ್ ಹೈಸ್ಕೂಲ್, ಹಾಸನ.
ಸುನಂದಾ, ರಾಜರಾಜೇಶ್ವರಿ ಇಂಜನಿಯರಿಂಗ್ ಹೈಸ್ಕೂಲ್, ಯಲ್ಲಾಪುರ.
ಸರಸ್ವತಿ, ಪ್ರಗತಿ ವಿದ್ಯಾಲಯ, ಕುಮಟ.
ಸುರೇಖಾನಾಯಕ್, ನಿರ್ಮಲಾ ಕಾನ್ವೆಂಟ್, ಕುಮಟ.
ಲಲಿತಾ ಬಿರಾದಾರ್, ಚಂದ್ರಕಾಂತ್ ಪಾಟೀಲ್ ಪಬ್ಲಿಕ್‍ಸ್ಕೂಲ್, ಕಲಬುರಗಿ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin