ಎಸ್‍ಬಿಐ ಬ್ಯಾಂಕ್ ಮಾಡಿತು ಚಮತ್ಕಾರ, ನಿವೃತ್ತ ಪೊಲೀಸ್ ಅಧಿಕಾರಿಗೆ ಸಿಕ್ತು ‘ಭಾರತರತ್ನ’..!

ಈ ಸುದ್ದಿಯನ್ನು ಶೇರ್ ಮಾಡಿ

BharataRatna

ಹುಬ್ಬಳ್ಳಿ,ಮೇ.12- ಭಾರತ ರತ್ನ ಪ್ರಶಸ್ತಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿ ಪಡೆಯುವುದೆಂದರೆ ಅದು ಸಾಮಾನ್ಯ ಮಾತ್ತಲ್ಲ. ದೇಶದಲ್ಲಿ ಅಪ್ರತಿಮ ಸೇವೆ ಮಾಡಿದವರಿಗೆ ಮಾತ್ರ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರೊಬ್ಬರು ಭಾಜನರಾಗಿದ್ದಾರೆ.  ಹೌದು… ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಬಸವರಾಜ ಅಡಿವೆಯ್ಯ ಹಿರೇಮಠ ಎಂಬುವವರೇ ಈ ವಿಶೇಷಣಕ್ಕೆ ಭಾಜನರಾದವರು. ಇವರ ಹೆಸರಿನ ಮುಂದೆ ಭಾರತ ರತ್ನ ವಿಶೇಷಣ ಸೇರಿದ್ದು ತೀವ್ರ ಕುತೂಹಲ ಮೂಡಿಸಿದೆ. ಎಸ್‍ಬಿಐ ಬ್ಯಾಂಕಿನ ಸ್ವಯಂಚಾಲಿತ ಪಾಸ್‍ಬುಕ್ ಪ್ರಿಂಟಿಂಗ್ ಮಶೀನ್‍ನಲ್ಲಿ ಪಾಸ್ ಬುಕ್ ಹಾಕಿದರೆ ಸಾಕು ಭಾರತ ರತ್ನ ಬಸವರಾಜ ಅಡಿವೆಯ್ಯ ಹಿರೇಮಠ ಎಂದು ಸ್ಕ್ರೀನ್ ಮೇಲೆ ಕಾಣಿಸುತ್ತಿದೆ.ಬಸವರಾಜ್ ಅವರು ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಮೊದಲು ಸಾಕಷ್ಟು ಬಾರಿ ಬ್ಯಾಂಕ್ ವ್ಯವಹಾರ ಮಾಡಿದ್ದಾರೆ. ಆದರೆ, ಈ ಬಗ್ಗೆ ಅವರು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಸೂಕ್ಷ್ಮವಾಗಿ ತಮ್ಮ ಹೆಸರನ್ನು ಸ್ಕ್ರೀನ್ ಮೇಲೆ ಕಂಡ ಬಸವರಾಜ್ ಅವರು ಸ್ವತಃ ಚಕಿತಗೊಂಡಿದ್ದಾರೆ.
ಇದನ್ನು ಕಂಡು ನನ್ನ ಕಣ್ಣನು ನಾನೇ ನನಗೆ ನಂಬಲಾಗಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮೂಲತ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಸವರಾಜ್ ಹಿರೇಮಠ ಅವರು 2011ರಲ್ಲಿಯೇ ನಗರದ ಕೇಶ್ವಾಪುರ ಎಸ್‍ಬಿಐ ಕೇಂದ್ರ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ. ವಹಿವಾಟಿನ ಅನುಕೂಲವಾಗಲಿ ಎಂಬ ಕಾರಣಕ್ಕೆ ಮುದ್ರಣವನ್ನು ಪ್ರಿಂಟಿಂಗ್ ಮಶೀನ್‍ನಲ್ಲಿ ತೆಗೆದುಕೊಂಡಿದ್ದಾರೆ. ಆದರೆ ಅವರು ತಂದು ತಮ್ಮ ಸ್ಕ್ರೀನ್ ಮೇಲಿನ ಹೆಸರನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸಿರಲಿಲ್ಲ.

ಕಳೆದ ಫೆಬ್ರವರಿಯಲ್ಲಿ ಬಸವರಾಜ್ ಅವರು ತಮ್ಮ ಪಾಸ್‍ಬುಕ್ ಎಂಟ್ರಿ ಮಾಡಿಸಲು ಕೇಶ್ವಾಪುರ ಮುಖ್ಯ ಕಚೇರಿಗೆ ಬಂದಿದ್ದಾರೆ. ಪ್ರಿಂಟಿಂಗ್ ಮಶೀನ್ ನಲ್ಲಿ ಬುಕ್ ಹಾಕಿದಾಗ ಸ್ಕ್ರೀನ್ ಮೇಲೆ ಭಾರತ ರತ್ನ ಬಸವರಾಜ್ ಹಿರೇಮಠ ಎಂದು ಇರುವದನ್ನು ಕಂಡು ಅಚ್ಚರಿಗೊಂಡಿದ್ದಾರೆ.  ಅಂದು ಏನೋ ತಾಂತ್ರಿಕ ದೋಷದಿಂದ ಬಂದಿರಬೇಕು ಎಂದು ಸುಮ್ಮನಾಗುತ್ತಾರೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಭಾರತ ರತ್ನ ವಿಶೇಷ ತಮ್ಮ ಹೆಸರಿನ ಮುಂದಿರುವುದು ಹಾಗೆಯೇ ಇದೆ.  ಹೀಗಾಗಿ ಬಸವರಾಜ್ ಅವರು ಏನು ಮಾಡಬೇಕು ಎಂದು ತೋಚದಂತಾಗಿದ್ದಾರೆ. ಭಾರತ ರತ್ನ ಪ್ರಶಸ್ತಿ ದೇಶದ ಅತ್ಯುನ್ನತ ಪ್ರಶಸ್ತಿ, ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಸಲ್ಲಬೇಕಾದುದ್ದು. ಆದರೆ ನನ್ನ ಹೆಸರಿನ ಮುಂದೆ ಭಾರತ ರತ್ನ ನನ್ನಂತ ಸಾಮಾನ್ಯನ ಹೆಸರಿನೊಂದಿಗೆ ಸೇರಿಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ.ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಆದಷ್ಟು ಬೇಗ ನನ್ನ ಹೆಸರಿನ ಮುಂದಿರುವ ಭಾರತ ರತ್ನ ತಗೆದು ಹಾಕಬೇಕು ಎನ್ನುತ್ತಾರೆ. ಇದರಿಂದ ಪ್ರಶಸ್ತಿಯ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾಳಜಿಯನ್ನು ಅವರು ವ್ಯಕ್ತಪಡಿಸಿದ್ದಾರೆ.   ಎಸ್‍ಬಿಐ ಬ್ಯಾಂಕ್ ಎಜಿಎಂ ಆನಂದ ಪಾಟೀಲ್ ಅªರೂ ಇದರಿಂದ ಅಚ್ಚರಿಗೊಂಡಿದ್ದಾರೆ. ಈ ರೀತಿ ಬರಲು ಸಾಧ್ಯವಿಲ್ಲ. ಇದು ನಮಗೂ ಅಚ್ಚರಿಯನ್ನುಂಟು ಮಾಡಿದೆ. ಪ್ರಶಸ್ತಿ ಪಡೆದರೆ ಮಾತ್ರ ಈ ರೀತಿ ಬರುತ್ತದೆ. ಈ ರೀತಿ ಬೇರೆ ಖಾತೆಯಲ್ಲಿಯೂ ಪ್ರಮಾದ ಆಗಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

ಆದರೆ, ಬಸವರಾಜ್ ಅವರು ತಮ್ಮ ಹೆಸರಿನ ಮುಂದಿನ ಭಾರತ ರತ್ನ ತಗೆದು ಹಾಕಿ ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆ ಸರಿಪಡಿಸಿ ಎನ್ನುವ ಅವರ ಸಾಮಾಜಿಕ ಕಳಕಳಿ ಪ್ರಶಂಸೆಗೆ ಪಾತ್ರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin