ಏಕಾಏಕಿ ಎತ್ತಂಗಡಿಗೆ ಐಪಿಎಸ್, ಐಎಎಸ್ ಅಧಿಕಾರಿಗಳ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS

ಬೆಂಗಳೂರು, ಆ.8- ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ 15 ದಿನಗಳಲ್ಲಿ ನಿರಂತರವಾಗಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದಕ್ಕೆ ಹಿರಿಯ ಅಧಿಕಾರಿಗಳ ತಂಡ ಸಿಡಿಮಿಡಿಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಠಿಆ ಅವರಿಗೆ ದೂರು ನೀಡಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಒಂದು ಗುಂಪು ವರ್ಗಾವಣೆ ಮಾಡುವಾಗ ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ನಿರ್ದೆಶನ ಹಾಗೂ ಕರ್ನಾಟಕ ನಾಗರಿಕ ಸೇವಾ ಮಂಡಳಿ (ಕೆಸಿಎಸ್‍ಬಿ) ನಿಯಮದ ಪ್ರಕಾರ ಯಾವುದೇ ಒಬ್ಬ ಅಧಿಕಾರಿಯನ್ನು
ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕನಿಷ್ಠ 6 ತಿಂಗಳೊಳಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ, ಸರ್ಕಾರ ಕಳೆದ 15 ದಿನಗಳಿಂದ ಪ್ರತೀ ದಿನ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳನ್ನು ದಿಢೀರನೆ ವರ್ಗಾವಣೆ ಮಾಡುತ್ತಿರುವುದು ಅಸಮಾಧಾ ನಕ್ಕೆ ಕಾರಣವಾಗಿದೆ.
ಹಿರಿಯ ಅಧಿಕಾರಿಗಳ ಒಂದು ತಂಡ ಮುಖ್ಯಕಾರ್ಯದರ್ಶಿಯನ್ನು ಭೇಟಿ ಮಾಡಿ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಕೋರಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡ ಪಿ.ಮಣಿವಣ್ಣನ್, ಭೂ ದಾಖಲೆ, ಸರ್ವೆ ಹಾಗೂ ಪರಿಹಾರ ವಿಭಾಗದ ಆಯುಕ್ತ ಮೌನೀಶ್ ಮುದ್ಗಲ್ ಸೇರಿದಂತೆ ಕೆಲವು ಅಧಿಕಾರಿಗಳನ್ನು ಕೇವಲ ಮೂರೇ ತಿಂಗಳೊಳಗೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಎತ್ತಂಗಡಿ ಮಾಡಿರುವುದು ಕಣ್ಣು ಕೆಂಪಾಗುವಂತೆ ಮಾಡಿದೆ.

ಸರ್ಕಾರ ಪದೇ ಪದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ರಾಜಕೀಯ ಕಾರಣಗಳಿಗಾಗಿ ಬೇಕಾಬಿಟ್ಟಿ ವರ್ಗಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅಧಿಕಾರಿಗಳು ಮುಖ್ಯಕಾರ್ಯದರ್ಶಿಗೆ ಪ್ರಶ್ನೆ ಮಾಡಿದ್ದಾರೆ. ನಮಗೆ ವರ್ಗಾವಣೆ ಮಾಡಿರುವುದಕ್ಕೆ ವಿರೋಧವಿಲ್ಲ ಕನಿಷ್ಠ ಪಕ್ಷ 6 ತಿಂಗಳಾದರೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ನಾವು ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಇನ್ನು ಐಎಎಸ್ ಜತೆಗೆ ಐಪಿಎಸ್ ಅಧಿಕಾರಿಗಳು ಕೂಡ ಇದೇ ರೀತಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರವೀಣ್‍ಸೂದ್ ಬಗ್ಗೆ ಇಲಾಖೆಯಲ್ಲಿ ಅಂತಹ ವಿವಾದವೇನು ಇರಲಿಲ್ಲ. ಇದ್ದುದ್ದರಲ್ಲೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಯೇ ನಿರ್ವಹಿಸಿದ್ದರು. ಆದರೆ, ಸರ್ಕಾರ ಏಕಾಕಿ ಸುಳಿವು ನೀಡದೆ ಅವರನ್ನು ಇದ್ದಕ್ಕಿದ್ದಂತೆ ವರ್ಗಾಯಿಸಿ ಸುನೀಲ್‍ಕುಮಾರ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಿತು.

ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಹೇಮಂತ್ ಲಿಂಬಾಳ್ಕರ್ ಅವರನ್ನು ಪಶ್ಚಿಮ ವಲಯದ ಐಜಿಪಿಯನ್ನಾಗಿ ವರ್ಗಾವಣೆ ಮಾಡಿದರೆ, ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಪಿ.ರವಿ ಅವರನ್ನು ಕೆಎಸ್‍ಆರ್‍ಟಿಸಿಯ ಜಾಗೃತ ವಿಭಾಗದ ನಿರ್ದೇಶಕರನ್ನಾಗಿ ಎತ್ತಂಗಡಿ ಮಾಡಲಾಗಿದೆ.
ಹೀಗೆ ಆಡಳಿತ ವಿಭಾಗಕ್ಕೆ ಸರ್ಜರಿ ಮಾಡುವ ನೆಪದಲ್ಲಿ ಸರ್ಕಾರ ವರ್ಗಾವಣೆ ಮಾಡಿರುವುದರಿಂದ ಅಧಿಕಾರಿಗಳು ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin