ಏಕ ವ್ಯಕ್ತಿ ನಾಯಕತ್ವ ಮೊರೆ ಹೋಗಿ ತಕ್ಕ ಪಾಠ ಕಲಿತ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01
ಬೆಂಗಳೂರು, ಮೇ 15-ಸ್ವತಂತ್ರ ನಂತರ ಇದೇ ಮೊದಲ ಬಾರಿಗೆ ಏಕ ವ್ಯಕ್ತಿ ನಾಯಕತ್ವ ಮೊರೆ ಹೋಗಿದ್ದ ಕಾಂಗ್ರೆಸ್ ತಕ್ಕ ಪಾಠ ಕಲಿತಿದೆ. ಈಗಾಗಲೇ ದೇಶಾದ್ಯಂತ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಕರ್ನಾಟಕದಲ್ಲಾದರೂ ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗುತ್ತಿದ್ದು, ಸಣ್ಣಪುಟ್ಟ ಮೂರು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಕಾಂಗ್ರೆಸ್ ನಿರ್ನಾಮವಾದಂತಾಗಿದೆ.[ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]

ಸ್ವಾತಂತ್ರ್ಯ ನಂತರ ದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದ ಮೊರೆ ಹೋಗುತ್ತಿತ್ತು. ಕಳೆದ ವರ್ಷ ಗುಜರಾತ್ ವಿಧಾನಸಭೆ ಚುನಾವಣೆ ನಡೆದಾಗ ಎಐಸಿಸಿ ಉಪಾಧ್ಯಕ್ಷರಾಗಿದ್ದ ರಾಹುಲ್‍ಗಾಂಧಿ ಖುದ್ದಾಗಿ ಪ್ರಚಾರಕ್ಕಿಳಿದು ಹೋರಾಟ ನಡೆಸಿದ್ದರು. ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡದೆ ರಾಹುಲ್‍ಗಾಂಧಿಯವರೇ ಚುನಾವಣೆ ಮುಂಚೂಣಿ ವಹಿಸಿದ್ದರಿಂದ ಗೆಲ್ಲುವ ಸಾಧ್ಯತೆ ಇದ್ದ ಗುಜರಾತ್‍ನ್ನು ಕಾಂಗ್ರೆಸ್ ಕಳೆದುಕೊಂಡಿತು ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಅನುಭವದಿಂದ ಕರ್ನಾಟಕದಲ್ಲಿ ಪ್ರಯೋಗ ಮಾಡಲು ಮುಂದಾದ ಕಾಂಗ್ರೆಸ್ ಮತ್ತೆ ಮುಗ್ಗರಿಸಿದೆ. ಕರ್ನಾಟಕದಲ್ಲಿ ಸ್ಥಳೀಯ ನಾಯಕತ್ವ ಪ್ರಬಲವಾಗಿತ್ತು. ಸ್ವಾತಂತ್ರ್ಯನಂತರ ಈವರೆಗೂ ಬಹುತೇಕ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಿತ್ತು. ದೇವರಾಜ ಅರಸು, ಎಸ್.ಎಂ.ಕೃಷ್ಣ ಕಾಲದಲ್ಲಿ ಏಕವ್ಯಕ್ತಿ ನಾಯಕತ್ವಕ್ಕೆ ಕಾಂಗ್ರೆಸ್ ಮಣೆ ಹಾಕಿತ್ತು. ಆಗೆಲ್ಲ ಅರಸು, ಎಸ್.ಎಂ.ಕೃಷ್ಣ ಅವರಂಥ ನಾಯಕರು ಅತ್ಯಂತ ಪ್ರಭಾವಿಯಾಗಿದ್ದರು, ಕಾಂಗ್ರೆಸ್‍ನ ಸಂಘಟನೆ ಮೇಲೆ ಹಿಡಿತ ಹೊಂದಿದ್ದರು.

ಗುಜರಾತ್‍ನ ಚುನಾವಣೆ ಅನುಭವದ ಮೇಲೆ ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಏಕವ್ಯಕ್ತಿ ನಾಯಕತ್ವದ ಮೊರೆ ಹೋಗಲು ನಿರ್ಧರಿಸಿತ್ತು. ಚುನಾವಣೆಗೆ 9 ತಿಂಗಳು ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪ್ರಕಟಿಸಿತ್ತು.  ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಎರಡನೇ ಅವಧಿಗೆ ಮುಂದುವರೆಸಿತ್ತು. ಡಿ.ಕೆ.ಶಿವಕುಮಾರ್ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನಿಯೋಜಿಸಿ, ದಿನೇಶ್ ಗುಂಡೂರಾವ್ ಅವರನ್ನು ದಕ್ಷಿಣ ಕರ್ನಾಟಕ ಭಾಗಕ್ಕೆ ಎಸ್.ಆರ್.ಪಾಟೀಲ್ ಅವರನ್ನು ಕರ್ನಾಟಕ ಭಾಗಕ್ಕೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ, ಜಾತಿ ಲೆಕ್ಕಾಚಾರ ಹೊಂದಾಣಿಕೆ ಮಾಡಿತ್ತು. ಏನೇ ಹೊಂದಾಣಿಕೆ ಮಾಡಿದ್ದರೂ ಏಕವ್ಯಕ್ತಿ ನಾಯಕತ್ವದಲ್ಲೇ ಚುನಾವಣೆ ಎಂಬ ಘೋಷಣೆ ಕಾಂಗ್ರೆಸ್‍ಗೆ ಮುಳುವಾದಂತೆ ಕಂಡಿದೆ.

Facebook Comments

Sri Raghav

Admin