ಏಷ್ಯಾದಲ್ಲಿ ಭಯೋತ್ಪಾದನೆ ಹೆಚ್ಚಲು ಪಾಕ್ ಕುಮ್ಮಕ್ಕು : ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Mo0di-000

ಹಾಂಗ್ಝೆವು, ಸೆ.6-ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ಹಬ್ಬಿಸುವಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸೂಚ್ಯವಾಗಿ ಪ್ರಸ್ತಾಪಿಸುವ ಮೂಲಕ ಪಾಕ್ಗೆ ಮತ್ತೊಮ್ಮೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಭಾರತವು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಪುನರುಚ್ಚರಿಸಿದ್ದಾರೆ. ಇಲ್ಲಿ ಸಮಾರೋಪಗೊಂಡ ಜಿ-20 ಶೃಂಗಸಭೆಯ ಅಂತಿಮ ಅಧಿವೇಶದಲ್ಲಿ ಮಾತನಾಡಿದ ಮೋದಿ ಅವರು ಪಾಕ್ ವಿರುದ್ಧ ಪರೋಕ್ಷ ವಾಗ್ದಾಳಿಗೆ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು. ದಕ್ಷಿಣ ಏಷ್ಯಾದ ಒಂದು ದೇಶವು ನಮ್ಮ ಪ್ರಾಂತ್ಯದ ರಾಷ್ಟ್ರಗಳಲ್ಲಿ ಭಯೋತ್ಪಾದನೆಯನ್ನು ಪಸರಿಸುತ್ತಿದೆ ಎಂದು ಆರೋಪಿಸಿದರು.

ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಶಕ್ತಿಗಳು ವೃದ್ಧಿಯಾಗುತ್ತಿರುವುದು ಒಂದು ಮೂಲಭೂತ ಸವಾಲಾಗಿ ಪರಿಣಮಿಸಿದೆ. ಕೆಲವು ದೇಶಗಳು ಇದನ್ನು ರಾಜ್ಯದ ನೀತಿಯ ಒಂದು ಸಾಧನವಾಗಿ ಬಳಸಿಕೊಳ್ಳುತ್ತಿವೆ ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.   ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಭಾರತ ಸಹಿಸಿಕೊಳ್ಳುವುದಿಲ್ಲ. ಭಯೋತ್ಪಾದನೆಗೆ ಶೂನ್ಯ ಸಹನೆಯ ಒಂದು ನೀತಿಯನ್ನು ಭಾರತ ಹೊಂದಿದೆ ಎಂದು ಹೇಳಿದ ಪ್ರಧಾನಿ, ಈ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಧನಿ ಎತ್ತಬೇಕು ಮತ್ತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಈ ಪಿಡುಗಿನ ವಿರುದ್ಧ ತುರ್ತು ಹೋರಾಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಭಯೋತಾದನೆಗೆ ಪ್ರಾಯೋಜಕತ್ವ ಮತ್ತು ಸಹಕಾರ ನೀಡುವವರನ್ನು ಪ್ರತ್ಯೇಕಗೊಳಿಸಬೇಕು ಮತ್ತು ಅವರ ಮೇಲೆ ನಿರ್ಬಂಧ ಹೇರಬೇಕೆ ಹೊರತು, ಅಂಥವರನ್ನು ಪುರಸ್ಕರಿಸಬಾರದು. ಈ ನಿಟ್ಟಿನಲ್ಲಿ ಸಹಭಾಗಿತ್ವ ಮತ್ತು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಮೋದಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೂ ಕರೆ ನೀಡಿದ್ದಾರೆ.  ಏತನ್ಮಧ್ಯೆ, ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷೆ ಫ್ರಾನ್ಸಿಯೊಸ್ ಹಾಲೊಂಡೆ ಅವರನ್ನು ಭೇಟಿ ಮಾಡಿದ ಮೋದಿ, ಸ್ಕಾರ್ಪಿನ್ ಜಲಾಂತರ್ಗಾಮಿಯ ರಹಸ್ಯ ದಾಖಲೆಗಳು ಸೋರಿಕೆಯಾದ ಪ್ರಕರಣವನ್ನು ಪ್ರಸ್ತಾಪಿಸಿದರು.  ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೊಗನ್ ಅವರನ್ನು ಸಹ ಸಂಧಿಸಿ ಭಾರತದ ಎನ್ಎಸ್ಜಿ ಸದಸ್ಯತ್ವ ಕುರಿತು ಸಹ ಸಮಾಲೋಚನೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin