ಐಎಸ್ಐಗೆ ಹಣದ ನೆರವು ನೀಡುತ್ತಿದ್ದ ಹವಾಲಾ ಏಜೆಂಟ್ ಸೆರೆ
ಮುಂಬೈ, ಮೇ 4– ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಏಜೆಂಟ್ಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಒಬ್ಬ ಹವಾಲಾ ಆಪರೇಟರ್ನನ್ನು ಬಂಧಿಸಲಾಗಿದೆ. ಈತನಿಂದ 71.57 ಲಕ್ಷ ರೂ. ನಗದು ಮತ್ತು ಸೆಲ್ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ದಕ್ಷಿಣ ಮುಂಬೈನ ಮಸ್ಜೀದ್ ಬುಂದೇರ್ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ಅಲ್ತಾಫ್ ಖುರೇಷಿ(37) ಎಂಬಾತನನ್ನು ಸೆರೆಹಿಡಿಯಲಾಗಿದೆ. ಬೇಹುಗಾರಿಕೆ ಚಟುವಟಿಕೆಗಳನ್ನು ನಡೆಸಲು ಐಎಸ್ಐ ಏಜೆಂಟ್ ಅಫ್ತಾಬ್ ಅಲಿ (ಲಕ್ನೋದಲ್ಲಿ ಬಂಧಿತನಾಗಿದ್ದಾನೆ) ಬ್ಯಾಂಕ್ ಖಾತೆಗೆ ಖುರೇಷಿ ಹಣ ಜಮೆ ಮಾಡಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಅಫ್ತಾಬ್ ವಿಚಾರಣೆ ವೇಳೆ ಲಭಿಸಿದ ಮಾಹಿತಿಯನ್ನು ಆಧರಿಸಿ ಖುರೇಷಿಯನ್ನು ಆತನ ಮನೆಯಲ್ಲಿ ಬಂಧಿಸಲಾಯಿತು. ಈತ ಜಾವೇದ್ ನವಿವಾಲಾ ಎಂಬುವರ ಪರವಾಗಿ ಹವಾಲಾ ವಹಿವಾಟು ನಡೆಸುತ್ತಿದ್ದ. ಈತ ಸಹ ಐಎಸ್ಐ ಏಜೆಂಟ್ ಎಂದೇ ಪರಿಗಣಿಸಿ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS