ಐಎಸ್ ಉಗ್ರರ ವಿರುದ್ಧ ನಡೆದ ವಾಯುದಾಳಿಯಲ್ಲಿ 22 ಮಕ್ಕಳು, 6 ಶಿಕ್ಷಕರ ಸಾವು
ವಿಶ್ವಸಂಸ್ಥೆ, ಅ.27- ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಐಎಸ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 22 ಶಾಲಾ ಮಕ್ಕಳೂ ಸೇರಿದಂತೆ 28 ಮಂದಿ ಹತರಾಗಿದ್ದಾರೆ. ಈ ದುರಂತದ ಬಗ್ಗೆ ವಿಶ್ವಸಂಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೊಂದು ದುರಂತ, ವಿವೇಚನೆ ಇಲ್ಲದೇ ಈ ಕೃತ್ಯ ಎಸಗಿದ್ದರೆ ಇದೊಂದು ಯುದ್ಧ ಅಪರಾಧವಾಗುತ್ತದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯಾದ ಯೂನಿಸೆಫ್ ನಿರ್ದೇಶಕ ಅಂಟೊನಿ ಲೇಕ್ ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಹಿಡಿತದಲ್ಲಿರುವ ಇದ್ಲಿಬ್ ಪಟ್ಟಣದ ಹಾಸ್ ಗ್ರಾಮದ ಮೇಲೆ ರಷ್ಯಾ ಅಥವಾ ಸಿರಿಯಾ ಯುದ್ಧ ವಿಮಾನಗಳು ಆರು ದಾಳಿಗಳನ್ನು ನಡೆಸಿದವು. ಶಾಲಾ ಸಂಕೀರ್ಣ ಸಹ ದಾಳಿಗೆ ತುತ್ತಾಗಿ 22 ಮಕ್ಕಳು ಮತ್ತು ಆರು ಶಿಕ್ಷಕರು ಹತರಾದರು ಎಂದು ಮಾನವ ಹಕ್ಕುಗಳಿಗಾಗಿ ಇರುವ ಸಿರಿಯಾದ ವೀಕ್ಷಣಾಲಯ ತಿಳಿಸಿದೆ. ಉಗ್ರಗಾಮಿಗಳ ವಿರುದ್ಧ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಸಮರದಲ್ಲಿ ಶಾಲೆಯೊಂದರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ವಿವೇಚನೆ ಇಲ್ಲದೇ ಈ ಕೃತ್ಯ ನಡೆದಿರುವುದು ಸಾಬೀತಾದರೆ ಅದು ಯುದ್ಧ ಅಪರಾಧವಾಗುತ್ತದೆ ಎಂದು ಲೇಕ್ ಎಚ್ಚರಿಕೆ ನೀಡಿದ್ದಾರೆ.
ಹಿಂಸಾಚಾರಪೀಡಿತ ಸಿರಿಯಾದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳೊಂದಿಗೆ ಮಾರ್ಚ್ 2011ರಿಂದ ಆರಂಭವಾದ ಸಂಘರ್ಷದಿಂದಾಗಿ ಈವರೆಗೆ 3 ಲಕ್ಷಕ್ಕೂ ಹೆಚ್ಚು ನಾಗರಿಕರು ಹತರಾಗಿದ್ದು, ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಪಲಾಯನ ಮಾಡಿರುವ ಸಂತ್ರಸ್ತರ ಸಂಖ್ಯೆಗೆ ಲೆಕ್ಕವೇ ಇಲ್ಲ.
► Follow us on – Facebook / Twitter / Google+