ಐಎಸ್ ಸೇರಿದ್ದ ಕೇರಳ ಯುವಕ ಆಫ್ಘನ್ ವಾಯುದಾಳಿಯಲ್ಲಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ISIS-KErala--01

ಕಾಸರಗೋಡು(ಕೇರಳ), ಆ.1-ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆಗೆ ಸೇರಿಕೊಂಡಿದ್ದನೆಂದು ಹೇಳಲಾದ ಕೇರಳದ ಕಾಸರಗೋಡು ಜಿಲ್ಲೆ ಟ್ರಿಕ್ಕರಿಪುರ್ ಗ್ರಾಮದ ನಿವಾಸಿ 23 ವರ್ಷದ ಮರ್ವಾನ್ ಇಸ್ಮಾಯಿಲ್ ಎಂಬ ಯುವಕ ಅಮೆರಿಕ ಮಿತ್ರ ಪಡೆಗಳು ಆಫ್ಘಾನಿಸ್ಥಾನದಲ್ಲಿ ನಡೆಸಿದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಇಸ್ಮಾಯಿಲ್ ಸಾವಿನ ಕುರಿತಂತೆ ಆಫ್ಘಾನಿಸ್ಥಾನದ ಅಪರಿಚಿತ ಸ್ಥಳವೊಂದರಿಂದ ಜಿಲ್ಲೆಯ ಟ್ರಿಕ್ಕರಿಪುರ್‍ನಲ್ಲಿರುವ ಮೃತ ಇಸ್ಮಾಯಿಲ್ ತಂದೆಗೆ ನಿನ್ನೆಯಷ್ಟೆ ಟೆಲಿಗ್ರಾಮ್ ಆಪ್ ಮೂಲಕ ಸಂದೇಶವೊಂದು ಬಂದು ತಲುಪಿದೆ. ಇದರೊಂದಿಗೆ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಬಿ. ಸಿ. ಅಬ್ದುಲ್ ರೆಹ್ಮಾನ್ ಅವರಿಗೂ ಕೂಡ ಅದೇ ದಿನವೇ ಈ ಕುರಿತಂತೆ ಸಂದೇಶ ಕಳುಹಿಸಲಾಗಿದೆ ಎಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.

ಕೇರಳದಿಂದ ಕಳೆದ ವರ್ಷ ಐಎಸ್ ಸೇರಲು ಕೇರಳದಿಂದ ತೆರಳಿದ್ದ 21 ಮಂದಿ ಯುವಕರಲ್ಲಿ ಮೃತ ಇಸ್ಮಾಯಿಲ್ ಒಬ್ಬನಾಗಿದ್ದಾನೆ. ಇಸ್ಮಾಯಿಲ್ ತಂದೆ ಮತ್ತು ಅಬ್ದುಲ್ ರೆಹಮಾನ್‍ಗೆ ಈ ಸಂದೇಶಗಳನ್ನು ಕಳುಹಿಸಿರುವ ವ್ಯಕ್ತಿಯೂ ಕೂಡ ಅದೇ ತಂಡದ ಮತ್ತೊಬ್ಬ ಯುವಕ ಅಸ್ಫಾಕ್ ಮಜೀದ್ ಎಂಬುವವನು. ಆದರೆ ಈ ಸಂದೇಶ ನಿರ್ದಿಷ್ಟವಾಗಿ ಎಲ್ಲಿಂದ ಬಂದಿದೆ ಎಂಬ ಮಾಹಿತಿಯಾಗಲಿ, ಇಸ್ಮಾಯಿಲ್ ಬಗೆಗಿನ ವಿವರಗಳಾಗಲಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮರ್ವಾನ್ ಇಸ್ಮಾಯಿಲ್ ಐಎಸ್ ಸೇರುವ ಮೊದಲು ಕೊಲ್ಲಿ ರಾಷ್ಟ್ರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಗುಂಪಿಗೆ ಸೇರಿದ ಯಾಹ್ಯ ಎಂಬ ಪಾಲಕ್ಕಾಡ್ ಜಿಲ್ಲೆಯ ಯುವಕನೂ ಕೂಡ ಇತ್ತೀಚೆಗೆ ನಡೆದಿದ್ದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin