ಐಟಿ ಇಲಾಖೆಯವರು ನನ್ನ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎನಿಸುತ್ತಿದೆ : ಡಿ.ಕೆ.ಶಿ

ಈ ಸುದ್ದಿಯನ್ನು ಶೇರ್ ಮಾಡಿ

DKShivakumar

ಬೆಂಗಳೂರು, ಮಾ.18- ರಾಜ್ಯದಲ್ಲಿ ಹಲವರ ದೂರವಾಣಿಯನ್ನು ಐಟಿ ಇಲಾಖೆ ಅಧಿಕಾರಿಗಳು ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಇದನ್ನು ನೋಡಿದರೆ ನನಗೂ ನಿಜ ಎನಿಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ, ಐಟಿ ಸೇರಿದಂತೆ ಹಲವು ತನಿಖಾ ತಂಡಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆ ನಾನು ದೂರವಾಣಿಯಲ್ಲಿ ಮಾತನಾಡುವಾಗ ಅಡಚಣೆಗಳು ಆಗಿದ್ದು, ಇದು ಕದ್ದಾಲಿಕೆ ಇರಬಹುದೆಂಬ ಅನುಮಾನ ನನಗೂ ಬಂದಿತ್ತು ಎಂದು ಹೇಳಿದ್ದಾರೆ.

ಗೋವಿಂದರಾಜು ಅವರ ನಿವಾಸದಲ್ಲಿ ಡೈರಿ ಸಿಕ್ಕಿದೆ ಎಂಬ ಮಾಹಿತಿಗೆ ಸಂಬಂಧಿಸಿದಂತೆ ನನಗೂ ಕೂಡ ನೋಟಿಸ್ ಬಂದಿತ್ತು. ಅದರಂತೆ ವಿಚಾರಣೆಗೆ ಹೋಗಿ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಹಲವು ಬಾರಿ ಇಂತಹ ನೋಟಿಸ್‍ಗಳು ಬಂದಿವೆ. ಇದು ನನಗೆ ಹೊಸದಲ್ಲ ಎಂದಿದ್ದಾರೆ.  ಕೆಲ ಕಾಳಧನಿಕರು, ಸಮಾಜಘಾತುಕರ ಬಗ್ಗೆ ನಿಗಾ ಇಡಲು ಐಟಿ ಅಧಿಕಾರಿಗಳು ದೂರವಾಣಿಗಳನ್ನು ಟ್ರ್ಯಾಪ್ ಮಾಡಿರಬಹುದಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ ನಯವಾಗಿಯೇ ಉತ್ತರಿಸಿದ ಡಿಕೆಶಿ, ಅವರಿಗೆ ಯಾವ ರೀತಿಯ ಸ್ವಾತಂತ್ರ್ಯ, ಕಾನೂನು ಇದೆಯೋ ನನಗೆ ತಿಳಿದಿಲ್ಲ ಎಂದರು.

ಹಿಂದೆ ಯುಪಿಎ ಸರ್ಕಾರ ಇದ್ದಾಗ ತನಿಖಾ ಸಂಸ್ಥೆಗಳಿಗೆ ಸ್ವಾಯತತ್ತೆ ನೀಡಲಾಗಿತ್ತು. ಆದರೆ, ಇಂದು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.  ಕ್ರಮ: ಒಕ್ಕಲಿಗರ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಂತೆ ಈಗಾಗಲೇ 3 ಸದಸ್ಯರ ತನಿಖಾ ತಂಡವನ್ನು ರಚಿಸಲಾಗಿದೆ. ಅವರು ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ಸ್ಥಳಾಂತರ:ರಾಜೀವ್‍ಗಾಂಧಿ ಆರೋಗ್ಯ ವಿವಿಯ ಆಡಳಿತ ಕಚೇರಿ ನಾಳೆಯಿಂದ ರಾಮನಗರ ಜಿಲ್ಲೆಗೆ ಸ್ಥಳಾಂತರವಾಗಲಿದೆ. ಕೆಲವರು ರಾಜ್ಯಪಾಲರ ನಿಲುವಿನ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಗೌರ್ನರ್ ಬಳಿ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಸ್ಥಳಾಂತರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin