ಐಟಿ ದಾಳಿಯಲ್ಲಿ ಸಿಕ್ಕಿಬಿದ್ದ ಜಯಚಂದ್ರ, ಚಿಕ್ಕರಾಯಪ್ಪ ಅಮಾನತ್ತಿಗೆ ಆಗ್ರಹಿಸಿ ಮೇಲ್ಮನೆಯಲ್ಲಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Session-Belagavi-000001

ಬೆಳಗಾವಿ, ಡಿ.2- ಆದಾಯ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಆಪ್ತ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾಧಿಕಾರಿ ಜಯಚಂದ್ರ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಸೃಷ್ಟಿಸಿದವು. ಸರ್ಕಾರ ನೀಡಿದ ಉತ್ತರಕ್ಕೆ ಸಮಾಧಾನಪಟ್ಟುಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು.

ಬೆಳಗ್ಗೆ 11 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿಷಯ ಪ್ರಸ್ತಾಪಿಸಿ, ರಾಜ್ಯದಲ್ಲಿ ಇಂದು ಜನತೆ ಎರಡು ಸಾವಿರ ಹಣ ಪಡೆಯಲು ಕಿಲೋಮೀಟರ್‍ಗಟ್ಟಲೆ ನಿಲ್ಲುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಊಟ, ನೀರು ಇಲ್ಲದೆ ಹಣಕ್ಕಾಗಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ. ಇಬ್ಬರು ಅಧಿಕಾರಿಗಳ ಮನೆಯಲ್ಲಿ 100 ಹಾಗೂ 2000ರೂ. ಮುಖಬೆಲೆಯ ಭಾರೀ ಪ್ರಮಾಣದ ನೋಟುಗಳು ದಾಳಿ ವೇಳೆ ಸಿಕ್ಕಿವೆ. ಜತೆಗೆ 7ಕೆಜಿ ಚಿನ್ನದ ಗಟ್ಟಿ, ಏಳೂವರೆ ಕೆಜಿ ಬಂಗಾರ, ಬೆಲೆಬಾಳುವ ಐಶಾರಾಮಿ ಕಾರು ವಶಪಡಿಸಿಕೊಳ್ಳಲಾಗಿದೆ. ಮೊದಲು ಸರ್ಕಾರ ಈ ಇಬ್ಬರು ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಪಡಿಸಬೇಕೆಂದು ಆಗ್ರಹಿಸಿದರು.

ದೇಶದೆಲ್ಲೆಡೆ ಕಪ್ಪುಹಣದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ 500, 1000ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರಿಂದ ದಿನದ ವಹಿವಾಟಿಗೆ ಜನ ಪರಿತಪಿಸುತ್ತಿದ್ದಾರೆ. ಈ ಅಧಿಕಾರಿಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಎಲ್ಲಿಂದ ಬಂತು. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ. ಮಾಧ್ಯಮಗಳಲ್ಲಿ ಈ ಇಬ್ಬರು ಅಧಿಕಾರಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಆಪ್ತರೆಂದು ವರದಿಯಾಗಿದೆ. ಪ್ರತಿಪಕ್ಷಗಳು ವಿಷಯ ಪ್ರಸ್ತಾಪಿಸುವ ಮೊದಲೇ ಸರ್ಕಾರವೇ ಅಮಾನತುಪಡಿಸಬಹುದೆಂದು ನಾನು ನಿರೀಕ್ಷಿಸಿದ್ದೆ. ಇಂತಹ ಭ್ರಷ್ಟರನ್ನಿಟ್ಟುಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತೀರಿ ಎಂದು ಏರಿದ ಧ್ವನಿಯಲ್ಲಿ ವಾಗ್ದಾಳಿ ನಡೆಸಿದರು.
ತಹಸೀಲ್ದಾರ್, ಶಿಕ್ಷಕರು ಸೇರಿದಂತೆ ಕೆಲವು ಅಧಿಕಾರಿಗಳು ತಪ್ಪು ಮಾಡಿದಾಗ ಇಲಾಖಾ ವಿಚಾರಣೆ ನಡೆಸದೆ ಈ ಸದನದಲ್ಲೇ ಅಮಾನತು ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಸಭಾ ನಾಯಕರಾದ ನಿಮಗೇ (ಡಾ.ಜಿ.ಪರಮೇಶ್ವರ್) ಈ ಇಬ್ಬರು ಅಧಿಕಾರಿಗಳನ್ನು ಅಮಾನತುಪಡಿಸುವ ಅಧಿಕಾರವಿದೆ. ಯಾರ ಜತೆಯಲ್ಲೂ ಚರ್ಚಿಸದೆ ಮೊದಲು ಅವರನ್ನು ಅಮಾನತುಪಡಿಸಿ ಇದರಿಂದ ರಾಜ್ಯದ ಜನತೆಗೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.

ಬಳಿಕ ಸಭಾನಾಯಕರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸರ್ಕಾರ ಯಾವುದೇ ಅಧಿಕಾರಿಗಳನ್ನು ರಕ್ಷಣೆ ಮಾಡುವುದಿಲ್ಲ. ಮೊದಲು ಆದಾಯ ತೆರಿಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಇದರಲ್ಲಿ ಯಾವ ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ, ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ. ಎಷ್ಟೇ ದೊಡ್ಡವರಿರಲಿ, ಯಾರೇ ಆಗಿರಲಿ ಅವರ ವಿರುದ್ಧ ನೆಲದ ಕಾನೂನಿನಡಿಯೇ ಕ್ರಮ ಜರುಗಿಸುತ್ತೇನೆಂದು ತಿಳಿಸಿದರು.

ಈ ವೇಳೆ ಮೇಜು ಕುಟ್ಟಿದ ಜೆಡಿಎಸ್‍ನ ಬಸವರಾಜ ಹೊರಟ್ಟಿ, ಯಾವುದೇ ಒಬ್ಬ ಅಧಿಕಾರಿ ಮೇಲ್ನೋಟಕ್ಕೆ ತಪ್ಪು ಮಾಡಿದ್ದಾನೆ ಎಂದು ಕಂಡುಬಂದರೆ ಯಾರ ಅನುಮತಿಯನ್ನೂ ಕಾಯದೆ ಅಮಾನತುಪಡಿಸಿ. ಈ ಹಿಂದೆ ಕೆಲವು ಅಧಿಕಾರಿಗಳು ತಪ್ಪು ಮಾಡಿದಾಗ ವಿಚಾರಣೆ ನಡೆಸದೆಯೇ ಅಮಾನತುಪಡಿಸಿದ ಸಾಕಷ್ಟು ಉದಾಹರಣೆಗಳಿವೆ. ಸಭಾನಾಯಕರಾದ ನೀವು ಯಾರ ಒಪ್ಪಿಗೆಯನ್ನೂ ಕಾಯಬೇಕಾದ ಅವಶ್ಯಕತೆ ಇಲ್ಲ. ಇದು ರಾಜ್ಯದ ಜನತೆಯ ಪ್ರಶ್ನೆಯಾಗಿರುವುದರಿಂದ ಮೊದಲು ಅಧಿಕಾರಿಗಳನ್ನು ಅಮಾನತುಪಡಿಸಿ, ಇಲ್ಲಸಲ್ಲದ ಸಬೂಬು ಹೇಳಬೇಡಿ ಎಂದು ಆಗ್ರಹಿಸಿದರು.

ಇಂದು 2000 ಪಡೆಯಲು ಎಟಿಎಂ ಬಳಿ ಜನ ಪರದಾಡಿದರೆ ಬ್ಯಾಂಕ್‍ನಲ್ಲಿ ವಾರಕ್ಕೆ 24 ಸಾವಿರ ಹಣ ಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ಹೊಸ ನೋಟುಗಳೇ ಸಿಕ್ಕಿವೆ ಎಂದರೆ ಅತ್ಯಾಶ್ಚರ್ಯವಾಗುತ್ತದೆ. ಇಷ್ಟಾದರೂ ಅಧಿಕಾರಿಗಳನ್ನು ಅಮಾನತುಪಡಿಸಲು ಇರುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿದರು.
ನೀವು ಮುಖ್ಯಮಂತ್ರಿಯೊಂದಿಗಾಗಲಿ, ಮುಖ್ಯ ಕಾರ್ಯದರ್ಶಿಯೊಂದಿಗಾಗಲಿ ಮಾತನಾಡಬೇಕಾದ ಅಗತ್ಯವಿಲ್ಲ. ಯಾವುದೇ ಒಬ್ಬ ಅಧಿಕಾರಿಯನ್ನು ಅಮಾನತುಪಡಿಸಿದರೆ ಅದು ಶಿಕ್ಷೆಯಲ್ಲ. ಮೇಲ್ನೋಟಕ್ಕೆ ಯಾವುದೇ ತಪ್ಪು ಮಾಡಿಲ್ಲ ಎಂದು ಕಂಡುಬಂದರೆ ಅಮಾನತು ಹಿಂಪಡೆಯಬಹುದು. ಹಾಗಿದ್ದರೂ ಸರ್ಕಾರ ಮೀನಾಮೇಷ ಎಣಿಸುವುದು ಏಕೆ ಎಂದು ಪ್ರಶ್ನಿಸಿದರು.
ಆಗ ಪರಮೇಶ್ವರ್ ನನಗೆ ಪ್ರಕರಣದ ಗಾಂಭೀರ್ಯತೆ ಅರ್ಥವಾಗುತ್ತದೆ. ಯಾವುದೇ ಒಬ್ಬ ಅಧಿಕಾರಿಯನ್ನು ಅಮಾನತುಪಡಿಸಬೇಕಾದರೆ ಕೆಲವು ಕಾನೂನು ಪ್ರಕ್ರಿಯೆಗಳಿರುತ್ತವೆ. ಈಗಾಗಲೇ ಸ್ಪಷ್ಟಪಡಿಸಿರುವಂತೆ ಸರ್ಕಾರ ಯಾವುದೇ ಅಧಿಕಾರಿಗಳನ್ನೂ ರಕ್ಷಣೆ ಮಾಡುವುದಿಲ್ಲ. ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ತಪ್ಪಿತಸ್ಥರನ್ನು ಸೇವೆಯಿಂದ ಅಮಾನತುಪಡಿಸುವುದು ಅಥವಾ ವಜಾ ಮಾಡುವುದು ಸೇರಿದಂತೆ ಎಲ್ಲ ರೀತಿಯ ಕಾನೂನು ಕ್ರಮ ಜರುಗಿಸಲಾಗುವುದು. ಕಲಾಪ ನಡೆಯಲು ಅನುವು ಮಾಡಿಕೊಡಿ ಎಂದು ಪ್ರತಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು.

ಈ ಹಂತದಲ್ಲಿ ಪ್ರತಿಪಕ್ಷಗಳ ಸದಸ್ಯರಾದ ರಾಮಚಂದ್ರಗೌಡ, ಕೆ.ಬಿ.ಶಾಣಪ್ಪ, ವಿ.ಸೋಮಣ್ಣ, ಗಣೇಶ್ ಕಾರ್ನಿಕ್, ಸೋಮಣ್ಣ ಬೇವಿನಮರದ್, ಎಂ.ಕೆ.ಪ್ರಾಣೇಶ್ ಸೇರಿದಂತೆ ಹಲವು ಸದಸ್ಛ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಚಿವರಾದ ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಸದಸ್ಯರಾದ ಎ.ರವಿ, ಎಚ್.ಎಂ.ರೇವಣ್ಣ, ಎಸ್.ಆರ್.ಪಾಟೀಲ್ ಸರ್ಕಾರದ ಬೆಂಬಲಕ್ಕೆ ನಿಂತರು. ಸರ್ಕಾರ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆ. ಇಬ್ಬರನ್ನೂ ಅಮಾನತುಪಡಿಸಲು ಇಲ್ಲಸಲ್ಲದ ಸಬೂಬು ಹೇಳುವುದು ಬೇಡ. ಮೊದಲು ಅಮಾನತುಪಡಿಸಿ. ನಂತರ ಹೇಳಿಕೆ ನೀಡಿ ಎಂದು ರಾಮಚಂದ್ರಗೌಡ ಒತ್ತಾಯಿಸಿದರು.

ಕಳೆದ ಎರಡು ದಿನಗಳಿಂದ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಗೃಹ ಸಚಿವರಾಗಿ ನಿಮಗೆ ಮಾಹಿತಿ ಇಲ್ಲವೆಂದರೆ ಹೇಗೆ? ಗುಪ್ತಚರ ಇಲಾಖೆ ಸತ್ತು ಹೋಗಿದೆಯೆ? ಇಲ್ಲವೆ ಭ್ರಷ್ಟರನ್ನು ರಕ್ಷಿಸುವ ಹುನ್ನಾರವೆ ಎಂದು ಗಣೇಶ್ ಕಾರ್ನಿಕ್ ಪ್ರಶ್ನಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‍ನ ಎಸ್.ಆರ್.ನಾಯಕ್, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ನಿಮ್ಮ ಪಕ್ಷದ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ.  ಇನ್ನೂ ಕೆಲವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಹೀಗಿರುವಾಗ ಯಾವ ನೈತಿಕತೆ ಮೇಲೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನ ಉಗ್ರಪ್ಪ ಮಾತನಾಡಿ, ಐಟಿ ಅಧಿಕಾರಿಗಳು ನಡೆಸಿದ ವೇಳೆ ಸಿಕ್ಕಿಬಿದ್ದವರು ಯಾರ ಆಪ್ತರೂ ಅಲ್ಲ. ಆಪ್ತರು ಎಂದು ಹೇಳುವುದು ಸರಿಯಲ್ಲ. ಮೇಲ್ನೋಟಕ್ಕೆ ಇವರು ತಪ್ಪು ಮಾಡಿರುವುದು ಕಂಡುಬಂದಿರುವುದರಿಂದ ಅಮಾನತುಪಡಿಸುವುದು ಸರಿ ಎಂದರು.  ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿದಾಗ ಸಭಾಪತಿ ಸದನವನ್ನು ಕೆಲಕಾಲ ಮುಂದೂಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin