ಐಟಿ, ಬಿಟಿಯಲ್ಲಷ್ಟೆಯಲ್ಲ ಆತ್ಮಹತ್ಯೆಯಲ್ಲೂ ಬೆಂಗಳೂರು ನಂ. 01

ಈ ಸುದ್ದಿಯನ್ನು ಶೇರ್ ಮಾಡಿ

Suicide-0002

ಬೆಂಗಳೂರು, ಅ.22-ಐಟಿಬಿಟಿ ಸಿಟಿ, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿಗಳಿಸಿರುವ ರಾಜಧಾನಿ ಬೆಂಗಳೂರು ಆತ್ಮಹತ್ಯೆಯಲ್ಲೂ ನಂಬರ್ 1 ಸ್ಥಾನದಲ್ಲಿದೆ. ಕಳೆದ 3 ವರ್ಷದಿಂದ ಪ್ರತಿವರ್ಷ ಸರಾಸರಿ 1,800ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 1200 ಮಂದಿ ಪುರುಷರು ಎಂಬುದು ವಿಶೇಷ. ರಾಜ್ಯದಲ್ಲಿ 2015 ರಲ್ಲಿ 10,786 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲೇ 1,875 ಪ್ರಕರಣ ದಾಖಲಾಗಿದೆ ಎಂದು ಪೊಲೀಸರ ಅಂಕಿ-ಅಂಶಗಳಿಂದ ಬಯಲಾಗಿದೆ.   ಇಡೀ ರಾಜ್ಯಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2013 ಮತ್ತು 2014ಕ್ಕೆ ಹೋಲಿಸಿದರೆ ಆತ್ಮಹತ್ಯೆ ಸಂಖ್ಯೆ ಕೊಂಚ ಇಳಿಮುಖವಾಗಿದೆ. 2013 ರಲ್ಲಿ ಬೆಂಗಳೂರು ನಗರದಲ್ಲಿ 2003 ಆತ್ಮಹತ್ಯೆ ಪ್ರಕರಣಗಳಾಗಿತ್ತು. 2014 ರಲ್ಲಿ ಈ ಸಂಖ್ಯೆ 1904ಕ್ಕೆ ಇಳಿದಿತ್ತು.

2015 ರಲ್ಲಿ 1,875 ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್ ಸಿಆರ್ ಬಿ) 2014 ರ ಮಾಹಿತಿಯಂತೆ ದೇಶದ 53 ಬೃಹತ್ ಸಿಟಿಗಳಲ್ಲಿ ಚೆನ್ನೈ ಬಿಟ್ಟರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಆತ್ಮಹತ್ಯೆ(1906) ಪ್ರಕರಣ ವರದಿಯಾಗಿವೆ. ಚೆನ್ನೈನಲ್ಲಿ 2014 ರಲ್ಲಿ 2,214 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು.  ರಾಜ್ಯದಲ್ಲಿ 2013 ರಲ್ಲಿ 12,680 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8,663 ಪುರುಷರು ಹಾಗೂ 4,017 ಮಹಿಳೆಯರಿದ್ದಾರೆ. 2014 ರಲ್ಲಿ ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 7,684 ಪುರುಷರು ಹಾಗೂ 3,259 ಮಹಿಳೆಯರಾಗಿದ್ದಾರೆ. 2015 ರಲ್ಲಿ ಒಟ್ಟು 10,786 ಆತ್ಮಹತ್ಯೆಗಳು ನಡೆದಿದ್ದು, 7454 ಪುರುಷರು ಹಾಗು 3332 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲಿನಿಂದ ಜಿಗಿದು ಅಥವಾ ಹಳಿಗೆ ತಲೆಕೊಟ್ಟು ವರ್ಷಕ್ಕೆ ರಾಜ್ಯದಲ್ಲಿ ಸರಾಸರಿ 500 ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2015 ರಲ್ಲಿ 555 ಜನ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪ್ರಕರಣಗಳನ್ನು ರೈಲ್ವೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು ?

ನಗರ ಪ್ರದೇಶಗಳಲ್ಲಿ ಕೆಲಸದ ಒತ್ತಡ, ಕೆಲಸ ಅರಸಿ ಬರುವವರಿಗೆ ನಿರಾಸೆ, ಕೌಟುಂಬಿಕ ಕಲಹ, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಶೈಕ್ಷಣಿಕ ಒತ್ತಡ. ಬದಲಾದ ಜೀವನ ಶೈಲಿ ಮತ್ತಿತರ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಕಾರಣ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

► Follow us on –  Facebook / Twitter  / Google+

Facebook Comments

Sri Raghav

Admin