ಐತಿಹಾಸಿಕ 500ನೇ ಟೆಸ್ಟ್ ಗೆದ್ದುಬೀಗಿದ ಭಾರತ, ಸರಣಿಯಲ್ಲಿ 1-0 ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Terst

ಕಾನ್ಪುರ, ಸೆ.26- ಐತಿಹಾಸಿಕ 500ನೆ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಹಿರಿ ಹಿರಿ ಹಿಗ್ಗಿದೆ. ಪ್ರವಾಸಿ ನ್ಯೂಜಿಲ್ಯಾಂಡ್ ತಂಡವನ್ನು 197 ರನ್‍ಗಳ ಅಂತರದಿಂದ ಮಣಿಸುವ ಮೂಲಕ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಕೊನೆ ದಿನವಾದ ಇಂದು ಗೆಲುವಿಗೆ ಅವಶ್ಯಕವಾಗಿದ್ದ ಕಿವಿಸ್ ಪಡೆಯ 6 ವಿಕೆಟ್‍ಗಳನ್ನು ಬಹು ಬೇಗನೆ ಉರುಳಿಸುವಲ್ಲಿ ಅಶ್ವಿನ್, ಜಡೇಜಾ ಯಶಸ್ವಿಯಾದರು. ಆರಂಭದಲ್ಲೇ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಕಿವಿಸ್‍ಗೆ ಇಂದು ವಿಕೆಟ್ ಕೀಪರ್ ಲುಕ್ ರೋಂಚಿ ಹಾಗೂ ಮಿಚ್ಚರ್ ಸ್ನ್ಯಾಟರ್ 5ನೆ ವಿಕೆಟ್ ಜತೆಯಾಟದಲ್ಲಿ ಭಾರತದ ಬೌಲರ್‍ಗಳನ್ನು ಸ್ವಲ್ಪ ಹೊತ್ತು ಕಾಡಿದರು.
ತಂಡದ ಮೊತ್ತ 158 ರನ್ ಆಗಿದ್ದಾಗ ಜಡೇಜಾ ಅವರ ಬೌಲಿಂಗ್‍ನಲ್ಲಿ ರೋಂಚಿ (80) ರನ್ ಗಳಿಸಿ ಔಟ್ ಆಗುವ ಮೂಲಕ ಜೋಡಿ ಬೇರ್ಪಟ್ಟಿತು. ಇದಾದ ಬಳಿಕ ಕಿವಿಸ್ ಪಾಳಯದಲ್ಲಿ ಸೋಲಿನ ಛಾಯೆ ಆವರಿಸಿತು. ಬಹುಬೇಗನೆ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಹೊಸ ಇತಿಹಾಸ ಸೃಷ್ಟಿಸಲು ವಿರಾಟ್‍ಕೊಹ್ಲಿ ತನ್ನ ಸ್ಪಿನ್ನರ್‍ಗಳ ಮೇಲೆ ಹೆಚ್ಚು ಅವಲಂಬಿತರಾದರು.
ಇದು ಫಲ ನೀಡಿ ಅರ್ಧ ಶತಕ ಸಿಡಿಸಿ ಹುಮ್ಮಸ್ಸಿನಿಂದಲೇ ಬ್ಯಾಟ್ ಬೀಸುತ್ತಿದ್ದ ಸ್ನ್ಯಾಟರ್ (71) ಅವರನ್ನು ಪೆವಿಲಿಯನ್‍ಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು. ನ್ಯೂಜಿಲೆಂಡ್‍ನ 6ನೆ ವಿಕೆಟ್ ಪತನಗೊಂಡಂತಾಯಿತು.

ಇನ್ನು ಬಾಲಂಗೋಚಿಗಳ ಪರೇಡ್ ಶುರುವಾಯಿತು. ಒಬ್ಬರ ನಂತರ ಒಬ್ಬರು ಔಟಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. ಒಟ್ಟಾರೆ ಒಂದು 236 ರನ್‍ಗಳಾಗುವಷ್ಟರಲ್ಲಿ ಕಿವಿಸ್ ಸರ್ವಪತನ ಕಂಡಿತು.  ಕೊನೆಯಲ್ಲಿ ವಾಲ್ಟಿಂಗ್ (18), ಗ್ರೇಕ್ (1) ಅವರನ್ನು ವಿಕೆಟ್ ಪಡೆಯುವಲ್ಲಿ ಮಹಮ್ಮದ್ ಶಮಿ ಯಶಸ್ವಿಯಾದರು. 197 ರನ್‍ಗಳ ಅಂತರದಿಂದ ನ್ಯೂಜಿಲ್ಯಾಂಡ್‍ನ ವಿಲಿಯಮ್ಸ್ ಪಡೆ ಭಾರತದೆದುರು ಸೋಲನ್ನೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಅಶ್ವಿನ್ ಒಟ್ಟಾರೆ (11) ವಿಕೆಟ್ ಪಡೆದು ಗಮನ ಸೆಳೆದರೆ ಜಡೇಜಾ (6) ವಿಕೆಟ್ ಪಡೆದು ಭಾರತದ ಸ್ಪಿನ್ನರ್‍ಗಳ ಬಲ ಪ್ರದರ್ಶಿಸಿದರು.  ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ದಿಗ್ವಿಜಯ ಸಾಧಿಸುವ ಮೂಲಕ ವಿರಾಟ್ ಕೊಹ್ಲಿ ಪಡೆ ಹೊಸ ಮೈಲಿಗಲ್ಲು ಸಾಧಿಸಿದೆ. ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಅಮೋಘ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ರ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 318
ದ್ವಿತೀಯ ಇನ್ನಿಂಗ್ಸ್ 377/5 (ಡಿ)
ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ 262/(ಆಲ್‍ಔಟ್)
ದ್ವಿತೀಯ ಇನ್ನಿಂಗ್ಸ್ 236/(ಆಲ್‍ಔಟ್)

► Follow us on –  Facebook / Twitter  / Google+

Facebook Comments

Sri Raghav

Admin