ಐಪಿಎಲ್ ನಲ್ಲಿ ಎದುರಾಳಿಗಳಿಗೆ ಸಿಂಹ ಸ್ವಪ್ನ ಕಾಡಿದ ಈ ಟಾಪ್ 10 ಬ್ಯಾಟ್ಸ್’ಮೆನ್’ಗಳು ಇವರು

ಈ ಸುದ್ದಿಯನ್ನು ಶೇರ್ ಮಾಡಿ

Batsmen--01

ಟೆಸ್ಟ್ , ಏಕದಿನ, ಟ್ವೆಂಟಿ-20ಗಿಂತ ಹೆಚ್ಚಿನ ಕ್ರೇಜ್ ಹುಟ್ಟಿಸಿರುವ ಐಪಿಎಲ್ 10ರ ಆವೃತ್ತಿಗೆ ಇನ್ನು 2 ದಿನವೇ ಬಾಕಿ. ಈಗಾಗಲೇ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಹಾಗೂ ಆಟಗಾರನನ್ನು ಬೆಂಬಲಿಸಲು ಕೇಶವಿನ್ಯಾಸ, ಟ್ಯಾಟೂಗಳ ಮೂಲಕ ತಯಾರಾಗಿದ್ದಾರೆ. ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್, ಜಡೇಜಾ, ಕೆ.ಎಲ್.ರಾಹುಲ್‍ರಂತಹ ಸ್ಟಾರ್ ಆಟಗಾರರ ಅನುಪಸ್ಥಿತಿ ನಡುವೆಯೂ ಈ ಬಾರಿ ಮಿಂಚುವ ಬ್ಯಾಟ್ಸ್‍ಮನ್‍ಗಳ್ಯಾರು, ಬೌಲರ್‍ಗಳ್ಯಾರು, ಆರೇಂಜ್ ಹಾಗೂ ಪರ್ಪಲ್ ಕ್ಯಾಪ್ ಗೆಲ್ಲುವರ್ಯಾರೂ? ಈ ಬಾರಿ ಐಪಿಎಲ್ ಮುಕುಟ ಯಾರಿಗೆ ಒಲಿಯುತ್ತದೆ ಎಂಬ ಲೆಕ್ಕಾಚಾರಗಳು ಜೋರಾಗಿಯೇ ನಡೆದಿದೆ.
ಹೇಳಿ ಕೇಳಿ ಐಪಿಎಲ್ ಅಂದರೆ ಅದು ಬ್ಯಾಟ್ಸ್‍ಮನ್‍ಗಳ ಸ್ವರ್ಗವೇ ಸರಿ. ಅದರಲ್ಲೂ ದಶಕದ ಮೊದಲ ಐಪಿಎಲ್‍ನಲ್ಲಿ ಮಿಂಚುವ 10 ಸ್ಟಾರ್ ಬ್ಯಾಟ್ಸ್‍ಮನ್‍ಗಳು ಇವರಾಗಬಹುದೇ ಎಂದು ಲೆಕ್ಕಚಾರ ಶುರುವಾಗಿದೆ.

1) ವಿರಾಟ್‍ಕೊಹ್ಲಿ:

ಕಳೆದ ಬಾರಿ ಆರೇಂಜ್ ಕ್ಯಾಪ್‍ನ ವಿಜೇತರಾದ ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಆರಂಭಿಕ ಪಂದ್ಯಗಳಲ್ಲಿ ತಪ್ಪಿಸಿಕೊಂಡರೂ ಕೂಡ ನಂತರ ಬಂದು ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಮೆರೆಯಲಿದ್ದಾರೆ ಎಂಬುದು ಸುಳ್ಳಲ್ಲ .
ಪಂದ್ಯ: 139, ರನ್: 4110, ಗರಿಷ್ಠ ಸ್ಕೋರ್:113

2) ಕ್ರಿಸ್‍ಗೇಲ್:

ಆರ್‍ಸಿಬಿ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್‍ಮ್ಯಾನ್. ಕ್ರೀಸ್‍ನಲ್ಲಿ ನಿಂತರೆ ಸಾಕು ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಯೇ ಸುರಿಯುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರ, ಪ್ರೇಕ್ಷಕರ ಲೆಕ್ಕಾಚಾರ. ಆದರೆ ಸೂರ್ಯನಿಗೆ ಗ್ರಹಣ ಹಿಡಿಯುವಂತೆ 2016ರ ಆವೃತ್ತಿಯಲ್ಲಿ ಗೇಲ್ ರನ್ ಬರ ಅನುಭವಿಸಿ 10 ಪಂದ್ಯಗಳಿಂದ ಕೇವಲ 226 ರನ್‍ಗಳನ್ನು ಸಿಡಿಸಿ ನಿರಾಸೆ ಮೂಡಿಸಿದರು. ಐಪಿಎಲ್ ಆವೃತ್ತಿಯ ಮೊದಲ ಋತುವಿನಲ್ಲಿ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡದ ಪರ ಆಡಿ ಕಳಪೆ ಪ್ರದರ್ಶನದಿಂದ ತಂಡ ಹೊರಗಿಟ್ಟ ನಂತರ ಆರ್‍ಸಿಬಿ ಸೇರಿದ ಗೇಲ್ ಅಂದಿನಿಂದಲೂ ರನ್‍ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಪಂದ್ಯ:92, ರನ್:3426, ಗರಿಷ್ಠ ಸ್ಕೋರ್:175*

3) ಎಬಿಡಿ ವಿಲಿಯರ್ಸ್:

ತಂಡ ಕಠಿಣ ಪರಿಸ್ಥಿತಿಯಲ್ಲಿ ಇರಲಿ ಉತ್ತಮ ಲಯದಲ್ಲಿರಲಿ ತಂಡಕ್ಕೆ ತಮ್ಮ ಬ್ಯಾಟಿಂಗ್‍ನಿಂದ ರನ್‍ಗಳ ಬರವನ್ನು ನೀಗಿಸುವ ಅದ್ಭುತ ಬ್ಯಾಟಿಂಗ್ ಮಾಂತ್ರಿಕ. ಕಳೆದ ಋತುವಿನಲ್ಲಿ 687 ರನ್ ಗಳಿಸುವ ಮೂಲಕ ಅತಿ ಹೆಚ್ಚು ಗಳಿಸಿದ ಟಾಪ್ 3 ಬ್ಯಾಟ್ಸ್‍ಮನ್ ಎಂದು ಗುರುತಿಸಿಕೊಂಡಿದ್ದು ಈ ಋತುವಿನ ಆರಂಭಿಕ ಹಲವು ಪಂದ್ಯಗಳಲ್ಲಿ ತಂಡದ ಸಾರಥ್ಯವನ್ನು ವಹಿಸಿದರೂ ಕೂಡ ರನ್ ಹೊಳೆಯನ್ನು ಹರಿಸಲು ಸಜ್ಜಾಗಿರುವ ಆಟಗಾರ.
ಪಂದ್ಯ: 120, ರನ್: 3257, ಗರಿಷ್ಠ ಸ್ಕೋರ್: 133*

4) ಸ್ಟೀವನ್ ಸ್ಮಿತ್:

ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿದ್ದರೂ ಕೂಡ ಐಪಿಎಲ್‍ನಲ್ಲಿ ತಾನು ಪ್ರತಿನಿಧಿಸುತ್ತಿರುವ ರೈಸಿಂಗ್ ಪುಣೆ ಸುಪರ್‍ಜೆಂಟ್ ತಂಡವನ್ನು ಗೆಲ್ಲಿಸುವ ಹೊಣೆ ಹೊರುವುದರ ಜೊತೆಗೆ ಟೆಸ್ಟ್ ಪಂದ್ಯದಲ್ಲಿ ಪ್ರದರ್ಶಿಸಿದ ಬ್ಯಾಟಿಂಗ್ ಲಯವಲ್ಲೂ ಇಲ್ಲೂ ಮುಂದುವರಿಸಲು ಸಜ್ಜಾಗಿದ್ದಾರೆ.
ಪಂದ್ಯ: 54, ರನ್: 1231, ಗರಿಷ್ಠ ಸ್ಕೋರ್: 101

5)ಅಜೆಂಕ್ಯಾರಹಾನೆ:

ಕ್ರಿಕೆಟ್ ರಂಗದ ಎಲ್ಲಾ ಮಾದರಿಯ ಆಟಕ್ಕೂ ಹೇಳಿ ಮಾಡಿಸಿದ ಬ್ಯಾಟ್ಸ್‍ಮನ್. ಕಳೆದ ಋತುವಿನಲ್ಲಿ ತಾನು ಪ್ರತಿನಿಧಿಸಿದ ಆರ್‍ಪಿಎಸ್‍ನ ತಂಡದ ಎಲ್ಲಾ ಸ್ಟಾರ್ ಬ್ಯಾಟ್ಸ್‍ಮನ್‍ಗಳು ಎಡವಿದರೂ 480 ರನ್ ಗಳಿಸುವ ಮೂಲಕ ಗಮನ ಸೆಳೆದ ಆಟಗಾರ.
ಪಂದ್ಯ:95, ರನ್: 2675, ಗರಿಷ್ಠ ಸ್ಕೋರ್: 103*

6)ರೋಹಿತ್ ಶರ್ಮಾ:

ಗಾಯದ ಸಮಸ್ಯೆಯಿಂದ 3-4 ತಿಂಗಳಿನಿಂದ ಕ್ರಿಕೆಟ್ ಅಂಗಳದಿಂದ ದೂರ ಉಳಿದಿರುವ ರೋಹಿತ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯ ಬೇಕಾದರೆ ಐಪಿಎಲ್‍ನಲ್ಲಿ ರನ್ ಹೊಳೆ ಹರಿಸಲೇಬೇಕಾಗಿದೆ. ಅದ್ದರಿಂದ ಮುಂಬೈ ಇಂಡಿಯನ್ಸ್ ಪರ ಇವರು ರನ್ ಹೊಳೆ ಹರಿಸಲೇಬೇಕು.
ಪಂದ್ಯ:142, ರನ್: 3874, ಗರಿಷ್ಠ ಸ್ಕೋರ್:109*

7) ಡೇವಿಡ್ ವಾರ್ನರ್:

ಸನ್‍ರೈಸರ್ಸ್ ಹೈದ್ರಾಬಾದ್ ಚೊಚ್ಚಲ ಐಪಿಎಲ್ ಮುಕುಟವನ್ನು ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ ನಾಯಕ. ಈ ಬಾರಿಯೂ ಅದೇ ಕ್ರೇಜ್‍ನಲ್ಲಿರುವ ವಾರ್ನರ್ ಬ್ಯಾಟ್‍ನಿಂದ ರನ್ ಹೊಳೆ ಹರಿಯುತ್ತದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪಂದ್ಯ: 100, ರನ್: 3373, ಗರಿಷ್ಠ ಸ್ಕೋರ್: 109*

8) ಡ್ವೇನ್ ಸ್ಮಿತ್ :

ಕೆರಿಬಿಯನ್ ಬ್ಯಾಟ್ಸ್‍ಮನ್ ಡ್ವೇನ್ ಸ್ಮಿತ್ ಕ್ರೀಸ್‍ನಲ್ಲಿ ನಿಂತರೆ ಎದುರಾಳಿ ಬೌಲರ್‍ಗಳಿಗೆ ಕಂಟಕವೇ ಸರಿ. ಚೆನ್ನೈ ಸೂಪರ್ ಕಿಂಗ್ಸ್ 2 ಬಾರಿ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸ್ಮಿತ್ ಕಳೆದ ಬಾರಿ ಗುಜರಾತ್ ಲಯನ್ಸ್ ತಂಡದ ಪರ ಆಡಿ ಗಮನ ಸೆಳೆದಿದ್ದರು.
ಪಂದ್ಯ: 64, ರನ್: 1864, ಗರಿಷ್ಠ ಸ್ಕೋರ್: 87*

9) ಗ್ಲೆನ್‍ಮ್ಯಾಕ್ಸ್‍ವೆಲ್:

ಟ್ವೆಂಟಿ-20 ಸ್ಪೆಷಾಲಿಸ್ಟ್ ಎಂದೇ ಬಿಂಬಿಸಿಕೊಂಡಿರುವ ಆಸ್ಟ್ರೇಲಿಯಾ ಮೂಲದ ಗ್ಲೆನ್‍ಮ್ಯಾಕ್ಸ್‍ವೆಲ್ ಕ್ರೀಸ್‍ನಲ್ಲಿದ್ದಷ್ಟು ಕಾಲ ಬೌಂಡರಿ, ಸಿಕ್ಸರ್‍ಗಳಿಗೆ ಬರವಿಲ್ಲ ಎಂದು ಅಭಿಮಾನಿಗಳ ಅಂಬೋಣ. ಈ ಬಾರಿ ಕಿಂಗ್ಸ್ ಇಲೆವೆನ್ ತಂಡದ ಸಾರಥ್ಯವನ್ನು ಮ್ಯಾಕ್ಸ್‍ವೆಲ್ ಹೊತ್ತಿದ್ದರೂ ಕೂಡ ರನ್ ಗಳಿಕೆಯಲ್ಲಿ ಹಿಂದೆ ಬೀಳಲಾರರು.
ಪಂದ್ಯ :43, ರನ್: 918, ಗರಿಷ್ಠ ಸ್ಕೋರ್: 95

10) ರಾಬಿನ್ ಉತ್ತಪ್ಪ:

ಭಾರತ ತಂಡವನ್ನು ಪ್ರತಿನಿಧಿಸಲು ಹಾತೊರೆಯುತ್ತಿರುವ ಕನ್ನಡಿಗ. ರಣಜಿ, ವಿಜಯ್‍ಹಜಾರೆ, ದೇವದಾರ್ ಸರಣಿಯಲ್ಲಿ ರನ್ ಬರ ಅನುಭವಿಸಿದ್ದರು ಕೂಡ ಐಪಿಎಲ್‍ನಲ್ಲಿ ರನ್‍ಗಳ ಹೊಳೆಯನ್ನೇ ಹರಿಸಬಲ್ಲ ಟೆಕ್ನಿಕಲ್ ಆಟಗಾರ. ಕೆಕೆಆರ್ ಈ ಹಿಂದೆ ಚಾಂಪಿಯನ್ಸ್ ಆಗುವಲ್ಲಿ ಉತ್ತಪ್ಪರ ಕಾಣಿಕೆಯೂ ಮಹತ್ತರದ್ದಾಗಿದೆ.
ಟ್ವೆಂಟಿ-20 ಸ್ಪೆಷಾಲಿಸ್ಟ್ ಎನಿಸಿಕೊಂಡರೂ ಕಳೆದ ಋತುವಿನಲ್ಲಿ ರನ್ ಗಳಿಸಲು ಎಡವಿರುವ ಮೆಕುಲಂ (ಗುಜರಾತ್ ಲಯನ್ಸ್), ಪೋಲಾರ್ಡ್ (ಮುಂಬೈ ಇಂಡಿಯನ್ಸ್), ಯೂಸಫ್ ಪಠಾಣ್ (ಕೆಕೆಆರ್), ಮಹೇಂದ್ರ ಸಿಂಗ್ ಧೋನಿ (ರೈಸಿಂಗ್ ಪುಣೆ ಸೂಪರ್‍ಜೆಂಟ್ಸ್), ಯುವರಾಜ್‍ಸಿಂಗ್ (ಎಸ್‍ಆರ್‍ಎಚ್) ಹೆಚ್ಚು ಗಳಿಸಿದ ಟಾಪ್ 10 ಬ್ಯಾಟ್ಸ್‍ಮನ್‍ಗಳ ಲಿಸ್ಟ್‍ನಲ್ಲಿ ನಿಲ್ಲಲು ಹಾತೊರೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin