ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ 5 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Police-Arrest--01
ಬೆಂಗಳೂರು, ಜ.27- ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣ-ಆಭರಣ ದರೋಡೆ ಮಾಡುತ್ತಿದ್ದ ಐದು ಮಂದಿ ದರೋಡೆಕೋರರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 10 ಮೊಬೈಲ್ ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳೆಲ್ಲರೂ ಜೆಜೆ ನಗರ ಪಾದರಾಯನಪುರದ ನಿವಾಸಿಗಳು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೋಹೇಬ್ ಪಾಷ (19), ಜುಬೇರ್ ಪಾಷ (19), ಕಾರ್ ಅಸೆಸರಿಸ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ಮಹಮ್ಮದ್ ಅಫ್ರೀದ್ (19), ವೆಂಡಿಂಗ್ ಕೆಲಸ ಮಾಡುತ್ತಿದ್ದ ಸಯ್ಯದ್ ಸಮೀರ್ (19) ಮತ್ತು ಮಹಮ್ಮದ್ ಉಮರ್ (19) ಬಂಧಿತ ಆರೋಪಿಗಳು.

ಇತ್ತೀಚೆಗೆ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹಣ, ಮೊಬೈಲ್, ಚಿನ್ನಾಭರಣ ದರೋಡೆ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದುದರಿಂದ ದರೋಡೆಕೋರರ ಪತ್ತೆಗೆ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ಕೈಗೊಂಡಿದ್ದಾಗ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಬರುವ ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್‍ನಿಂದ ಮತ್ತಾಚಾರಿ ಇಂಡಸ್ಟ್ರಿಯಲ್ ಎಸ್ಟೇಟ್‍ಗಳಿಗೆ ಹೋಗುವ ರಸ್ತೆಯಲ್ಲಿ ದರೋಡೆ ಮಾಡಲು ಗುಂಪೊಂದು ಹೊಂಚು ಹಾಕುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ.
ಮಾಹಿತಿ ಆಧಾರದ ಮೇಲೆ ಬ್ಯಾಟರಾಯನಪುರ ಸಬ್‍ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ಆರೋಪಿಗಳ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ ಮಾರಕಾಸ್ತ್ರಗಳು, ಹೋಂಡಾ ಡಿಯೊ ಸ್ಕೂಟರ್, ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ 18 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ 10 ಮೊಬೈಲ್, 2 ಬಜಾಜ್ ಪಲ್ಸರ್, ಯಮಹ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಅನುಚೇತ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಡಾ.ಪ್ರಕಾಶ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಿವಸ್ವಾಮಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin