ಒಂದು ಕೋಟಿಗಿಂತ ಅಧಿಕ ಮೊತ್ತದ ವಿವಿ ಕಾಮಗಾರಿಗೆ ಅನುಮತಿ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Basavaraja-Rayareddy

ಬೆಂಗಳೂರು, ಫೆ.10-ರಾಜ್ಯದ ಯಾವುದೇ ವಿಶ್ವವಿದ್ಯಾಲಯವು ಇನ್ನು ಮುಂದೆ ಒಂದು ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿ ನಡೆಸಬೇಕಾದರೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.  ಪ್ರಶ್ನೋತ್ತರ ಅವಧಿಯಲ್ಲಿ ಎನ್.ನಾರಾಯಣ ಸ್ವಾಮಿ ಹಾಗೂ ಮಹಂತೇಶ್ ಕವಟಗಿ ಮಠ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಇನ್ನು ಮುಂದೆ ರಾಜ್ಯದಲ್ಲಿರುವ ಯಾವುದೇ ವಿಶ್ವವಿದ್ಯಾಲಯಗಳು ಒಂದು ಕೋಟಿಗಿಂತ ಹÉಚ್ಚು ಮೊತ್ತದ ಕಾಮಗಾರಿ ನಡೆಸಬೇಕಾದರೆ ಅನುಮತಿ ಪಡೆಯಬೇಕು. 10 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗೆ ಸಚಿವ ಸಂಪುಟ ಸಮಿತಿ ಒಪ್ಪಿಗೆ ಪಡೆಯಬೇಕು. ಒಂದು ಲಕ್ಷ ಮೊತ್ತದೊಳಗಿನ ಕಾಮಗಾರಿ ತುಂಡು ಗುತ್ತಿಗೆ ನಡೆಸದಂತೆ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಕಾಯ್ದೆಯನ್ನು ಕಾನೂನು ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲೇ ಹೊಸ ನೀತಿ ಜಾರಿಯಾಗಲಿದೆ ಎಂದು ತಿಳಿಸಿದರು.  ಶಿವಮೊಗ್ಗದಲ್ಲಿರುವ ಸಹ್ಯಾದ್ರಿ ಕಾಲೇಜಿನಲ್ಲಿ 4 ಕೋಟಿ ಕಾಮಗಾರಿಗೆ 11 ಕೋಟಿ 65 ಲಕ್ಷ ರೂ. ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ರಾಜ್ಯದ ಬಹುತೇಕ ಕಾಲೇಜಿನ ಅಭಿವೃದ್ಧಿ ಕೆಲಸಗಳಿಗೆ ನಿಗದಿಪಡಿಸಿದ ಹಣಕ್ಕಿಂತಲೂ ಹೆಚ್ಚಿನ ಹಣ ಬಿಡುಗಡೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಸರ್ಕಾರ ವಿವಿಗಳಿಗೆ ಬಿಡುಗಡೆ ಮಾಡಿರುವ ಹಣದ ಮೊತ್ತದ ಕಾಮಗಾರಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿತ್ತು ಎಂಬುದರ ಬಗ್ಗೆ ಆಯಾ ಅಪರ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ, ಸೂಪರಿಂಡೆಂಟ್ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಸಾಕಷ್ಟು ಅವ್ಯವಹಾರ ನಡೆಸಿರುವುದರ ಬಗ್ಗೆ ಕೇಳಿ ಬಂದಿತ್ತು. ಹೀಗಾಗಿ ಹೈಕೋರ್ಟ್ ನಿವೃತ್ತ ನ್ಯಾ.ಕೇಶವ ನಾರಾಯಣ್ ನೇತೃತ್ವದಲ್ಲಿ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆ. ಮೇಲ್ನೋಟಕ್ಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ಅಮಾನತು ಮಾಡಿದ್ದಾರೆ. ಏಳು ವಿವಿಗಳಲ್ಲಿ ಭಾರೀ ಅವ್ಯವಹಾರ ನಡೆದಿರುವ ಕಾರಣ ಮುಖ್ಯಮಂತ್ರಿಯವರ ಸೂಚನೆಯಂತೆ ಸಮಿತಿ ರಚಿಸಿರುವುದಾಗಿ ಹೇಳಿದರು.  ರಾಜ್ಯದ ವಿವಿಗಳಲ್ಲಿ ಅವ್ಯವಹಾರ ತಡೆಗಟ್ಟಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಅಧಿನಿಯಮ 2000 ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಹೊಸ ಕಾಯ್ದೆ ಜಾರಿ ಮಾಡಲು ಚಿಂತಿಸಿದ್ದೇವೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ ರಾಣಿಚೆನ್ನಮ್ಮ ಮಹಿಳಾ ವಿವಿಯ ಅಭಿವೃದ್ಧಿ ಕೈಗೊಳ್ಳಲು ಕಾನೂನು ತೊಡಕು ಎದುರಾಗಿತ್ತು. ಇಲ್ಲಿರುವ 175 ಎಕರೆ ಪ್ರದೇಶ ಅರಣ್ಯಪ್ರದೇಶಕ್ಕೆ ಸೇರಿರುವುದರಿಂದ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಖಾನಾಪುರ ತಾಲೂಕಿನಲ್ಲಿ ರಾಜ್ಯ ಸರ್ಕಾರ ಪರಿಹಾರವಾಗಿ 9 ಕೋಟಿ ರೂ. ಅಭಿವೃದ್ಧಿ ಕೆಲಸಕ್ಕೆ ನೀಡಲು ತೀರ್ಮಾನಿಸಿದ್ದು, ಕೇಂದ್ರ ಅರಣ್ಯ ಪರಿಸರ ಸಚಿವರ ಜೊತೆ ಪತ್ರದ ಮೂಲಕ ಮಾತುಕತೆ ನಡೆಸಿದೆ. ಇದೀಗ ಕೇಂದ್ರ ಸರ್ಕಾರ ಪುನಃ ರಾಜ್ಯಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಿದೆ. ಕಾನೂನು ಇದಕ್ಕೆಲ್ಲಾ ಸಮರ್ಪಕ ಉತ್ತರ ನೀಡಲಿದೆ ಎಂದರು.  ಈ ವಿವಿಯಲ್ಲಿ 150 ಕೋಟಿ ಪರಿಹಾರ ಯೋಜನೆ ರೂಪಿಸಲಾಗಿದೆ. ವಿಜಯಪುರದಲ್ಲಿರುವ ರಾಜ್ಯ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಸಲು ಅಧಿಸೂಚನೆ ಹೊರಡಿಸಲಾಗಿದೆ. ಮಹಿಳಾ ದಿನಾಚರಣೆಯಂದು ಮುಖ್ಯಮಂತ್ರಿಯವರು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ರಾಯರೆಡ್ಡಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin