ಒಂದು ಮತಪತ್ರ ನಾಪತ್ತೆ : ಜೆಡಿಎಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

malavalli
ಮಳವಳ್ಳಿ, ಸೆ.1- ಗ್ರಾಮ ಪಂಚಾಯ್ತಿಯೊಂದರ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಂದು ಮತಪತ್ರ ನಾಪತ್ತೆಯಾಗಿ ಭಾರಿ ಗೊಂದಲ ಸೃಷ್ಠಿಯಾಗಿರುವುದರ ಜೊತೆಗೆ ಇದರ ವಿರುದ್ದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪ್ರಸಂಗ ಸಹ ಜರುಗಿತು.  ತಾಲ್ಲೂಕಿನ ಹಿಟ್ಟನಹಳ್ಳಿ ಗ್ರಾಪಂನಲ್ಲಿ ಖಾಲಿ ಉಳಿದಿದ್ದ ಒಂದು ಸ್ಥಾನಕ್ಕೆ ಕಳೆದ 28 ರಂದು ಚುನಾವಣೆ ನಡೆದಿದ್ದು ಈ ಚುನಾವಣೆಯ ಮತ ಎಣಿಕೆ ಕಾರ್ಯ ನಿನ್ನೆ ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಜರುಗಿತು.

ಅಂದಿನ ಮತದಾನದ ವೇಳೆ ಒಟ್ಟು 886 ಮಂದಿ ತಮ್ಮ ಮತಚಾಲಾಯಿದ್ದರಾದರೂ ಮತಪೆಟ್ಟಿಗೆಯಲ್ಲಿ 885 ಮತಪತ್ರಗಳು ಮಾತ್ರ ಇದ್ದು ಒಂದು ಮತಪತ್ರ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿತು.ಒಬ್ಬ ಮತದಾರ ಮತಪತ್ರದಲ್ಲಿ ಮತ ಚಲಾಯಿಸುವ ಬದಲಾಗಿ ಮಾದರಿ ಮತಪತ್ರದಲ್ಲಿ ಮತ ಚಾಲಾಯಿಸಿ ಅದನ್ನು ಮತದಾನದ ಬಾಕ್ಸ್‍ಗೆ ಹಾಕಿದ್ದು ಮತ ಪತ್ರವನ್ನು ತಾನೇ ಕೊಂಡೊಯ್ದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಪಕ್ಷವಾದ ಜಡಿಎಸ್ ಕಾರ್ಯಕರ್ತರು ತಕ್ಷಣವೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮತಪತ್ರ ಕಾಣೆಯಾಗಲು ಹೇಗೆ ಸಾಧ್ಯ ಎಂದು  ಪ್ರಶ್ನಿಸತೊಡಗುತ್ತಿದ್ದಂತೆ ಎಣಿಕೆ ಕೇಂದ್ರದ ಆವರಣದಲ್ಲಿ ಕೆಲ ಕಾಲ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

ಒಂದು ಮತದಿಂದ ಕಾಂಗ್ರೆಸ್ ಬೆಂಬಲಿಗ ಮುನ್ನೆಡೆ ಗಳಿಸಿರುವುದಕ್ಕೂ ಒಂದು ಮತ ಪತ್ರ ನಾಪತ್ತೆಯಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹಿನ್ನೆಡೆ ಅನುಭವಿಸಿರುವುದಕ್ಕೂ ತಾಳೆ ಹಾಕಿದ ಜೆಡಿಎಸ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮತಪತ್ರ ಕಾಣೆಯಾಗಿರುವುದರ ಹಿಂದೆ ಚುನಾವಣಾಧಿಕಾರಿಗಳ ಕೈವಾಡವಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಅಲ್ಲಿಯವರಿಗೆ ಚುನಾವಣಾ ಫಲಿತಾಂಶವನ್ನು ಘೋಷಿಸಬಾರದು ಎಂದು ಆಗ್ರಹಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರಲ್ಲದೆ ಚುನಾವಣಾಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.

ಪರಿಣಾಮವಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಕೆಲ ಕಾವೇರಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲಿ ಸ್ಪಷ್ಟನೆ ನೀಡಿದ ತಹಸೀಲ್ದಾರ್ ದಿನೇಶ್‍ಚಂದ್ರ, ಚುನಾವಣೆಯಲ್ಲಿ ನಮ್ಮಿಂದ ಯಾವುದೇ ಲೋಪವಾಗಿಲ್ಲ. ಮತದಾರನೊಬ್ಬ ಗೊಂದಲಕ್ಕೊಳಗಾಗಿ ಮತಪತ್ರದಲ್ಲಿ ಮತಚಲಾಯಿಸುವ ಬದಲು ಮಾದರಿ ಮತಪತ್ರದಲ್ಲಿ ಮತಚಾಲಿಸಿ ಅದನ್ನೇ ಮತಪೆಟ್ಟಿಗೆಗೆ ಹಾಕಿದ್ದಾನೆ ಎಂದು ಹೇಳಿ ಈ ಚುನಾವಣೆಯಲ್ಲಿ ಉಮೇಶ್ ಜಯಗಳಿಸಿದ್ದಾರೆ ಎಂದು ಘೋಷಿಸಿದರು.

ಕಾಂಗ್ರೆಸ್ ಜಯಭೇರಿ:

ತಾಲ್ಲೂಕಿನ ಒಟ್ಟು ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳು ಸಹ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ. ಹಿಟ್ಟನಹಳ್ಳಿಯಿಂದ ಉಮೇಶ್, ಮಾರ್ಕಾಲು ಗ್ರಾಮದಿಂದ ಪುಟ್ಟಸ್ವಾಮಿ ಹಾಗೂ ಹಲದಾಸನಹಳ್ಳಿ ಗ್ರಾಮದಿಂದ ಲಕ್ಷ್ಮಮ್ಮ ಗೆಲುವು ಸಾಧಿಸಿರುವ ಅಭ್ಯರ್ಥಿಗಳಾಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin