ಒಂದೆಡೆ ಖುಷಿ ಮತ್ತೊಂದೆಡೆ ಆಘಾತ : ನರಸಿಂಗ್ ಯಾದವ್ ಗೆ 4 ವರ್ಷ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Narasingh-Yadav

ರಿಯೊ ಡಿ ಜನೈರೋ, ಆ.19- ಸಾಕ್ಷಿ ಮಲಿಕ್ ಅವರ ಕಂಚು ಪದಕದ ಗರಿ ಮತ್ತು ಪಿ.ವಿ.ಸಿಂಧು ಅವರ ಚಿನ್ನದ ಪದಕದ ಗುರಿಯೊಂದಿಗೆ ಭಾರತದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೇಲುತ್ತಿರುವಾಗಲೇ ದೇಶಕ್ಕೆ ಕಪ್ಪು ಚುಕ್ಕಿಯ ಕಳಂಕವೂ ಅಂಟಿಕೊಂಡಿದೆ. ಉದ್ದೀಪನ ಮದ್ದು ಸೇವನೆ ಆರೋಪ ಪ್ರಕರಣದಲ್ಲಿ ಭಾರತೀಯ ಕುಸ್ತಿಪಟು ನರಸಿಂಗ್ ಯಾದವ್ ಅವರನ್ನು ಒಲಂಪಿಕ್ ಕ್ರೀಡಾಕೂಟದಿಂದ ಉಚ್ಛಾಟಿಸಿ ನಾಲ್ಕು ವರ್ಷಗಳ ನಿಷೇಧ ವಿಧಿಸಲಾಗಿದೆ.  ನರಸಿಂಗ್ ಯಾದವ್ ಇಂದು ಫ್ರೀಸ್ಟೈಲ್ ಕುಸ್ತಿಯ 74 ಕೆ.ಜಿ ವಿಭಾಗದಲ್ಲಿ ತಮ್ಮ ಅಭಿಯಾನ ಆರಂಭಿಸಬೇಕಿತ್ತು. ಆದರೆ ಕ್ರೀಡಾ ನ್ಯಾಯಾಲಯ (ಕೋರ್ಟ್ ಆಫ್ ಅರ್ಬಿಟ್ರೇಷನ್ ಆಫ್ ಸ್ಪೋರ್ಟ್ಸ್) ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ನಿಷೇಧ ಎದುರಿಸಬೇಕಿದೆ. ಇದರಿಂದಾಗಿ ಒಂದೆಡೆ ಯಾದವ್ ಅವರ ಕ್ರೀಡಾ ಭವಿಷ್ಯ ಕಮರಿ ಹೋಗಿದ್ದರೆ, ಭಾರತಕ್ಕೆ ಕಳಂಕದ ಅಪಮಾನ ಅಂಟಿಕೊಂಡಂತಾಗಿದೆ.

ಕಳೆದ ತಿಂಗಳು ಉದ್ದೀಪನ ಮದ್ದು ಸೇವನೆ ಆರೋಪ ಎದುರಿಸಿದ್ದ ಅವರನ್ನು ನಿರ್ದೋಷಿ ರಾಷ್ಟ್ರೀಯ ಮದ್ದು ತಡೆ ಘಟಕ (ನಾಡಾ) ನೀಡಿದ್ದ ತೀರ್ಪಿನ ವಿರುದ್ಧ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಕ್ರೀಡಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.  ನಾಡಾ ತೀರ್ಪಿನ ವಿರುದ್ಧ ವಾಡಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕ್ರೀಡಾ ನಿರ್ಣಯ ನ್ಯಾಯಾಲಯವು (ಸಿಎಎಸ್) ವಾಡಾ ಪರ ತೀರ್ಮಾನ ಪ್ರಕಟಿಸಿತು. ಈ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಒಲಂಪಿಕ್ ಕ್ರೀಡಾಕೂಟದಿಂದ ದೂರವಿರಿಸಿ, ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ. ಜೂನ್ 25ರಂದು ನಾಡಾ ನಡೆಸಿದ ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ನಿಷೇಧಿತ ಮದ್ದು ಸೇವಿಸಿದ್ದು ದೃಢಪಟ್ಟಿತು. ಇದರಿಂದಾಗಿ ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ನಂತರ ನಾಡಾ ವಿಚಾರಣೆ ನಡೆಸಿ ಅವರು ಬಲಿಪಶು ಆಗಿದ್ದಾರೆ ಎಂದು ತೀರ್ಪು ನೀಡಿತ್ತು. ಆದಾಗ್ಯೂ ರಿಯೊ ಒಲಂಪಿಕ್ಸ್ಗೆ ತೆರಳಲು ಗ್ರೀನ್ ಸಿಗ್ನಲ್ ತೋರಿಸಿತ್ತು. ವಿಶ್ವ ಕುಸ್ತಿ ಫೆಡರೇಷನ್ ಸಹ ಅವಕಾಶ ನೀಡಿತ್ತು.

“ವಾಡಾ ಮೇಲ್ಮನವಿಯನ್ನು ಎತ್ತಿ ಹಿಡಿಯಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ನರಸಿಂಗ್ ಯಾದವ್ ಅವರನ್ನು ಅನರ್ಹಗೊಳಿಸಿ, ನಾಲ್ಕು ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಜೂ.25ರ ನಂತರ ಯಾದವ್ ಗಳಿಸಿದ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನೂರ್ಜಿತಗೊಳಿಸಲಾಗಿದೆ” ಎಂದು ಕ್ರೀಡಾ ನ್ಯಾಯಾಲಯ ತೀರ್ಪಿನ ಬಳಿಕ ಹೇಳಿಕೆ ನೀಡಿದೆ.  ಸಿಎಎಸ್ ಯಾದವ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಭಾರತೀಯ ಒಲಂಪಿಕ್ ಸಂಘದ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ , ಭಾರತೀಯ ಕುಸ್ತಿ ಪಟು ಪ್ರತಿಸ್ಪರ್ಧಿಗಳ ಬದಲಿಗೆ ಅವರ ಬೆಂಬಲಿಗರೇ ಹೆಣೆದ ಕುತಂತ್ರಕ್ಕೆ ಬಲಿಪಶುವಾಗಿದ್ದಾರೆ ಎಂದು ನೊಂದು ನುಡಿದು ಪ್ರತಿಕ್ರಿಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin