ಒಂದೇ ಲಿಫ್ಟ್ನಲ್ಲಿ ಯಡಿಯೂರಪ್ಪ, ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

eshwaraPP-A

ಬೆಂಗಳೂರು, ಆ.16-ಭಾರೀ ಕುತೂಹಲ ಕೆರಳಿಸಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ನೇಮಕಾತಿ ಪಟ್ಟಿ ಬದಲಾವಣೆ ಮಾಡದೆ ಇರಲು ಮುಖಂಡರು ತೀರ್ಮಾನಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷ ರಾದ ಮೇಲೆ ನಡೆದ ಮೊದಲ ಕೋರ್ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಬಹುದೆಂಬ ನಿರೀಕ್ಷೆ ಇತ್ತು.
ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಹಿಂದೆ ಪದಾಧಿಕಾರಿಗಳ ನೇಮಕಾತಿ ವಿಷಯ ಪಕ್ಷದಲ್ಲಿ ಭಾರೀ ರಾದ್ಧಾಂತ ಸೃಷ್ಟಿಸಿತ್ತು. ಪಟ್ಟಿ ಬದಲಾಯಿಸಬೇಕೆಂದು ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ನಿರ್ಮಲ್ಕುಮಾರ್ ಸುರಾನಾ ಸೇರಿದಂತೆ ಹಲವರು ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದರು.  ಹಾಗಾಗಿ ಇಂದು ಕೋರ್ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಗಿದೆ.
ಒಂದೇ ಲಿಫ್ಟ್ನಲ್ಲಿ ಬಂದರು:
ಪದಾಧಿಕಾರಿ ಗಳ ನೇಮಕಾತಿ ಬಳಿಕ ಹಾವು ಮುಂಗುಸಿ ಯಂತಿದ್ದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಇಂದು ಕೋರ್ಕಮಿಟಿ ಸಭೆಗೆ ಒಂದೇ ಲಿಫ್ಟ್ನಲ್ಲಿ ಜೊತೆ ಜೊತೆಯಾಗಿ ಆಗಮಿಸಿ ಅಚ್ಚರಿ ಮೂಡಿಸಿದರು.  ಸಭೆಯಲ್ಲಿ ಬಿಬಿಎಂಪಿ ಮೈತ್ರಿ, ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಯಾವುದೇ ವಿಷಯವೂ ಚರ್ಚೆಗೆ ಬಾರದೆ ಕೇವಲ ಪಕ್ಷ ಸಂಘಟನೆಗೆ ಮಾತ್ರ ಸೀಮಿತವಾಯಿತು ಎಂದು ತಿಳಿದುಬಂದಿದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ತಾವು ಕೈಗೊಂಡಿರುವ ಪಕ್ಷ ಸಂಘಟನೆ, ಇತರೆ ಕಾರ್ಯ ಯೋಜನೆಗಳ ವರದಿಯನ್ನು ಮಂಡಿಸಿದರು. ಉಳಿದಂತೆ ಪದಾಧಿಕಾರಿಗಳ ನೇಮಕಾತಿ, ಈಶ್ವರಪ್ಪ ನಡೆಸಲು ಉದ್ದೇಶಿಸಿದ್ದ ಹಿಂದ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಸಲು ಒಲವು ತೋರಲಿಲ್ಲ ಎನ್ನಲಾಗಿದೆ.  ಪಕ್ಷ ಸಂಘಟನೆ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಹೋರಾಟ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಯಡಿಯೂರಪ್ಪ ಈ ಮೂಲಕ ಪಕ್ಷದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ಒಂದು ಹೆಜ್ಜೆ ಯಶಸ್ವಿಯಾಗಿದ್ದಾರೆ ಎನ್ನಬಹುದಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin