ಒಎಲ್‍ಎಕ್ಸ್’ನಲ್ಲಿ ಕಾರು ಮಾರುವುದಾಗಿ ವಂಚಿಸಿದ್ದ ಇಬ್ಬರು ಐನಾತಿಗಳ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

2-Arrested--01

ಬೆಂಗಳೂರು, ಜು.7- ಒಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಇಬ್ಬರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನವೀನ್‍ಕುಮಾರ್ (30) ಮತ್ತು ಬೆಂಗಳೂರಿನ ಉತ್ತರಹಳ್ಳಿಯ ಮನು (38) ಬಂಧಿತ ವಂಚಕರು. ಒಎಲ್‍ಎಕ್ಸ್‍ನಲ್ಲಿ ಮಾರುತಿ ಎರ್ಟಿಗಾ ಕಾರನ್ನು ಮಾರಾಟ ಮಾಡುವುದಾಗಿ ನೀಡಿದ್ದ ಜಾಹೀರಾತನ್ನು ವ್ಯಕ್ತಿಯೊಬ್ಬರು ನೋಡಿ ಕಾರಿನ ಮಾಲೀಕನನ್ನು ಸಂಪರ್ಕಿಸಿದಾಗ, ಕಾರು ಏರ್ ಪೋರ್ಟ್ ಪಾರ್ಕಿಂಗ್‍ನಲ್ಲಿದೆ. ಪಾರ್ಕಿಂಗ್ ಚಾರ್ಜ್ ಮತ್ತಿತರ ಹಣ ನೀಡಿದಲ್ಲಿ ಮಾರುವುದಾಗಿ ಸುಳ್ಳು ಹೇಳಿ ನಂಬಿಸಿ ತನ್ನ ಸ್ನೇಹಿತನ ಐಸಿಐಸಿಐ ಬ್ಯಾಂಕ್ ಅಕೌಂಟ್‍ಗೆ 92,900ರೂ. ಹಣ ಹಾಕಿಸಿಕೊಂಡಿದ್ದಾನೆ.

ನಂತರ ಕಾರು ಪಡೆಯಲು ಈ ವ್ಯಕ್ತಿ ಏರ್‍ಫೋರ್ಟ್‍ಗೆ ಹೋದಾಗ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಗಮನಿಸಿ ತಾನು ಮೋಸ ಹೋಗಿರುವುದಾಗಿ ತಿಳಿದು ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು.  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಈ ಇಬ್ಬರು ವಂಚಕರನ್ನು ಬಂಧಿಸಿದ್ದಾರೆ.  ಆರೋಪಿಗಳಿಂದ ಮೂರು ಮೊಬೈಲ್ ಫೋನ್, ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಒಎಲ್‍ಎಕ್ಸ್ ವೆಬ್‍ಸೈಟ್‍ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ, ನಕಲಿ ದಾಖಲೆಗಳಿಂದ ಪಡೆದ ಸಿಮ್‍ಗಳನ್ನು ಬಳಸಿ ವಿವಿಧ ಮಾದರಿಯ  ವಾಹನಗಳ ಫೋಟೋವನ್ನು ಅಪ್‍ಲೋಡ್ ಮಾಡಿ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಕಾರುಗಳನ್ನು ಮಾರುವುದಾಗಿ ನಂಬಿಸಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ತಲೆಮರೆಸಿಕೊಳ್ಳುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin