ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಅಪ್ಪಾಜಿಗೌಡ ಪದಚ್ಯುತಿ

ಈ ಸುದ್ದಿಯನ್ನು ಶೇರ್ ಮಾಡಿ

Okkaligara-Sangha

ಬೆಂಗಳೂರು, ಜ.6- ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಡಾ.ಅಪ್ಪಾಜಿಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಒಕ್ಕಲಿಗರ ಸಂಘದ ಕಚೇರಿಯಲ್ಲಿಂದು ನಡೆದ ಮಹತ್ವದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಂಗಾಮಿ ಅಧ್ಯಕ್ಷರಾಗಿ ನಾರಾಯಣಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.  ಇಂದು ಸಹಕಾರ ಇಲಾಖೆಯ ಉಪ ನಿಬಂಧಕ ಬಿ.ಬಸಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟ್ಟು 35 ಮಂದಿ ನಿರ್ದೇಶಕರಲ್ಲಿ 18 ಮಂದಿ ಅಪ್ಪಾಜಿಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಲಾಗಿದೆ.

ಈ ಸಂಬಂಧ ಹೊಸ ಅಧ್ಯಕ್ಷರ ಆಯ್ಕೆಗೆ ಇದೇ 18ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.  ಒಕ್ಕಲಿಗರ ಸಂಘದ ನಿರ್ದೇಶಕರ ಪೈಕಿ ಅಪ್ಪಾಜಿಗೌಡರ ನಾಯಕತ್ವ ವಿರೋಧಿಸಿ 18 ಜನ ನಿರ್ದೇಶಕರು ಸಹಿ ಹಾಕಿ ಅವಿಶ್ವಾಸ ಮಂಡಿಸಿದ್ದರು. ಇಂದು ಅವಿಶ್ವಾಸ ಮಂಡಿಸಿದ ನಿರ್ದೇಶಕರು ಸಂಘದಲ್ಲಿ ಸಭೆ ಕರೆದಿದ್ದರು. ಈ ಸಭೆ ಸಂದರ್ಭದಲ್ಲಿ ಅಧ್ಯಕ್ಷರು ಆಗಮಿಸಿದಾಗ ಅಪ್ಪಾಜಿಗೌಡರ ಪರ ಹಾಗೂ ವಿರೋಧದ ಕಾರ್ಯಕರ್ತರ ನಡುವೆ ಪರಸ್ಪರ ವಾದ-ವಿವಾದ ನಡೆದಿತ್ತು. ಕಳೆದ ಹಲವು ದಿನಗಳಿಂದ ಅಪ್ಪಾಜಿಗೌಡರ ವಿರುದ್ಧ ನಿರ್ದೇಶಕರ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿಂದೆ ಕರೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅವಿಶ್ವಾಸ ನಿರ್ಣಯ ತಂದಿತ್ತಾದರೂ ಅದರಲ್ಲಿ ಅಪ್ಪಾಜಿಗೌಡ ಗೆದ್ದಿದ್ದರು. ಆದರೂ ಛಲ ಬಿಡದ ವಿರೋಧಿ ಬಣ ತನ್ನ ಹೋರಾಟವನ್ನು ಮುಂದುವರಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin