ಒಕ್ಕಲಿಗರ ಸಂಘದ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

DK
ಬೆಂಗಳೂರು, ಫೆ.19-ಅಕ್ಷರಶಃ ಒಡೆದ ಮನೆಯಂತಾಗಿರುವ ರಾಜ್ಯ ಒಕ್ಕಲಿಗರ ಸಂಘದ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಬದಲಾಗಿ ಮತ್ತಷ್ಟು ಜಟಿಲವಾಗುವ ಲಕ್ಷಣಗಳೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಘದ ನಿರ್ದೇಶಕರುಗಳ ಸಭೆ ನಡೆಸಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಬಿಕ್ಕಟ್ಟು ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೋಗಬೇಕೆಂಬ ತೀರ್ಮಾನವಾಗಿತ್ತು. ಆದರೆ ತೀರ್ಮಾನದ ಬೆನ್ನಲ್ಲೇ ಭಿನ್ನಮತದ ಚಟುವಟಿಕೆಗಳು ಸಂಘದಲ್ಲಿ ಮುಂದುವರೆದಿವೆ.ಸಂಘದ ನಿರ್ದೇಶಕರು ಒಬ್ಬರ ಮೇಲೆ ಮತ್ತೊಬ್ಬರು ಅವ್ಯವಹಾರ, ಭ್ರಷ್ಟಾಚಾರದ ಆರೋಪವನ್ನು ಹೊರಿಸುತ್ತಿರುವುದರಿಂದ ಹಾದಿಬೀದಿಯಲ್ಲಿ ಸಂಘದ ಬಗ್ಗೆ ಮಾತನಾಡುವಂತಾಗಿದೆ. ಅಷ್ಟೇ ಅಲ್ಲ, ಸಂಘದಲ್ಲಿ ನಿರ್ದೇಶರಲ್ಲೇ ಜಗಳ, ಗಲಾಟೆ, ಹೊಡೆದಾಟದ ಘಟನೆಗಳು ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಮಹದೇವ್ ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದಲ್ಲದೆ, ಭದ್ರತೆಗೆ ಗನ್‍ಮ್ಯಾನ್ ಒದಗಿಸುವಂತೆಯೂ ಸರ್ಕಾರವನ್ನು ಕೋರಿದ್ದಾರೆ. ಇದೇ ರೀತಿ ಒಬ್ಬರ ಮೇಲೊಬ್ಬರು ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆಯೂ ನಡೆದಿದೆ. ಸಮುದಾಯದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಬಹುತೇಕ ನಿರ್ದೇಶಕರು ಒಪ್ಪಿಗೆ ನೀಡಿದ ನಂತರವೂ ಸಂಘದಲ್ಲಿ ಸಹಮತ ಕಂಡುಬಂದಿಲ್ಲ. ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದ್ದ 18 ಮಂದಿ ನಿರ್ದೇಶಕರು ಇತ್ತೀಚೆಗೆ ಸಭೆ ಸೇರಿ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಮತ್ತು ಇತರೆ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.
ಫೆ.22 ರಂದು ಅಧ್ಯಕ್ಷ ಹುದ್ದೆ ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವ ದಿನಾಂಕವನ್ನೂ ಕೂಡ ನಿಗದಿಪಡಿಸಲಾಗಿದೆ. ಬೆಟ್ಟೇಗೌಡ ನೇತೃತ್ವದ ಬಣದಲ್ಲಿ ಗುರುತಿಸಿಕೊಂಡ ನಿರ್ದೇಶಕರು ಅವಿಶ್ವಾಸ ನಿರ್ಣಯ ಕೈಗೊಂಡಿರುವುದು ಮತ್ತು ಪದಾಧಿಕಾರಿಗಳ ಚುನಾವಣೆ ಘೊಷಣೆ ಮಾಡಿರುವುದು ಕಾನೂನು ಬಾಹಿರ ಎಂಬ ವಾದ ಮುಂದಿಟ್ಟಿದ್ದಾರೆ.
ಹೀಗಾಗಿ ಮುಂದಿನ ಅಧ್ಯಕ್ಷರು, ಪದಾಧಿಕಾರಿಗಳು ಯಾರಾಗಬೇಕೆಂಬ ನಿರ್ಣಯ ಆಗಿಲ್ಲ. ಜನಾಂಗದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿರುವುದಾಗಿ ಬಹುತೇಕ ನಾಯಕರು ಹೇಳುತ್ತಿದ್ದಾರೆ.ಬಗೆಹರಿಯಬೇಕಾಗಿದ್ದ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುವ ಸಂದರ್ಭಗಳು ಹೆಚ್ಚಾಗಿವೆ. ಅಧಿಕಾರಕ್ಕಾಗಿ ಪದೇ ಪದೇ ಉಂಟಾಗುತ್ತಿರುವ ಭಿನ್ನಮತದಿಂದ ಒಕ್ಕಲಿಗ ಸಮುದಾಯದಲ್ಲಿ ಸಂಘದ ನಿರ್ದೇಶಕರ ಬಗ್ಗೆ ತೀವ್ರ ಅಸಮಾಧಾನ ಉಂಟಾಗಿದೆ. ಬಹಳಷ್ಟು ಮಂದಿ ಆಡಳಿತಾಧಿಕಾರಿ ನೇಮಿಸಿದರೆ ಸೂಕ್ತ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಮುದಾಯದ ನಾಯಕರು ಭಿನ್ನಮತ ಮರೆತು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿ ಕಡೆ ಗಮನ ಹರಿಸುವಂತೆ ಸಲಹೆ ಮಾಡುತ್ತಿದ್ದಾರೆ. ಈ ನಡುವೆ ಪದಾಧಿಕಾರಿಗಳ ಆಕಾಂಕ್ಷಿಯಾಗಿರುವವರು, ಜನಾಂಗದ ಪ್ರಮುಖ ರಾಜಕಾರಣಿಗಳನ್ನು ಸಂಪರ್ಕಿಸತೊಡಗಿದ್ದಾರೆ.ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡ, ಡಾ.ಮಹದೇವ್ ಹಾಗೂ ಪ್ರೊ .ಎಂ.ನಾಗರಾಜ್ ಅವರು ಪದಾಧಿಕಾರಿಗಳ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಶ್ರೀಗಂಧದ ಕಾವಲು ಬಳಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ಆಸ್ಪತ್ರೆ ಉದ್ಘಾಟಿಸಿ ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಭಿವೃದ್ಧಿ ಕಡೆ ಗಮನಹರಿಸಬೇಕಾದ ನಿರ್ದೇಶಕರು ಪದೇ ಪದೇ ಅವಿಶ್ವಾಸ ನಿರ್ಣಯದ ಹಾದಿ ಹಿಡಿದಿರುವುದು ಮುಜುಗರವನ್ನುಂಟು ಮಾಡುತ್ತಿದೆ ಎಂದು ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟುಗಳ ದಾಖಲಾತಿಯಲ್ಲಿ ಹಣ ಮಾಡಲಾಗುತ್ತಿದೆ ಎಂಬ ಆರೋಪ ಸರ್ವೇಸಾಮಾನ್ಯವಾಗಿ ಕೇಳಿ ಬರುತ್ತಿದೆ.
ಸಂಘದ ನಿರ್ದೇಶಕರಲ್ಲಿ ಪ್ರಾಧ್ಯಾಪಕರು, ವೈದ್ಯರೇ ಹೆಚ್ಚಾಗಿ ಇದ್ದರೂ ಕೂಡ ಅಭಿವೃದ್ದಿ ಕಡೆ ಗಮನಹರಿಸದೆ ಭಿನ್ನಮತದ ಚಟುವಟಿಕೆಗಳೇ ಪ್ರಮುಖವಾಗಿರುವುದು ಒಕ್ಕಲಿಗ ಸಮುದಾಯದಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಒಟ್ಟಾರೆ ಜನಾಂಗದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ಸಂಘದ ನಿರ್ದೇಶಕರ ಭಿನ್ನಮತ ಶಮನಗೊಳ್ಳುವ, ಇಲ್ಲವೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ಅವಲಂಬಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

 

Facebook Comments

Sri Raghav

Admin